ರಾಜ್ಯ

ಎಸ್ ಎಸ್ ಎಲ್ ಸಿ ಅಂಕಪಟ್ಟಿ ಇನ್ನು ಮುಂದೆ ವಾಟರ್ ಪ್ರೂಫ್, ಫೈರ್ ಪ್ರೂಫ್

Sumana Upadhyaya

ಬೆಂಗಳೂರು: ಇನ್ನು ಮುಂದೆ ಹತ್ತನೇ ತರಗತಿ ಅಂಕಪಟ್ಟಿಗಳು ಹೆಚ್ಚು ಸುರಕ್ಷಿತವಾಗಿರಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಂಕಪಟ್ಟಿಯನ್ನು ನೀರು ಬಿದ್ದರೆ, ಅಗ್ನಿ ಅವಘಡಕ್ಕೆ ಒಳಗಾದರೆ ಹಾಳಾಗದಂತೆ ತಯಾರಿಸಲಿದೆ. ಈ ವರ್ಷದ ಮಾರ್ಚ್/ ಏಪ್ರಿಲ್ ಪರೀಕ್ಷೆಯಿಂದಲೇ ಜಾರಿಗೆ ತರಲು ಮಂಡಳಿ ಮುಂದಾಗಿದೆ. ಇದು ಜಾರಿಗೆ ಬಂದರೆ ಇನ್ನು ಮುಂದೆ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಳಾಗುತ್ತದೆ ಎಂದು ಚಿಂತಿಸಬೇಕಾಗಿಲ್ಲ.

ಇಲ್ಲಿಯವರೆಗೆ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಲ್ಯಾಮಿನೇಟ್ ಮಾಡಿ ನೀಡಲಾಗುತ್ತಿತ್ತು. ಆದರೆ ಲ್ಯಾಮಿನೇಟ್ ಮಾಡಿ ನೀಡಿದರೆ ಸಾಕಾಗುವುದಿಲ್ಲ, ಬೇಗನೆ ಹಾಳಾಗಿ ಹೋಗುತ್ತದೆ ಎಂಬ ದೂರುಗಳು ಬರುತ್ತಿದ್ದವು. ಎಸ್ ಎಸ್ ಎಲ್ ಸಿ ಸರ್ಟಿಫಿಕೇಟ್ ಪ್ರತಿಯೊಬ್ಬರಿಗೂ ಮುಖ್ಯವಾಗುತ್ತದೆ. ಹೀಗಾಗಿ ನೀರು ಬಿದ್ದರೂ ಹಾಳಾಗದ ಅಂಕಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಈ ವರ್ಷದಿಂದ ನೀಡುತ್ತಿದ್ದೇವೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲಾ ಹೇಳಿದರು.

ಪದವಿ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯಗಳಲ್ಲಿ ಯಾವ ರೀತಿ ಸುರಕ್ಷತೆಯ ಅಂಕಪಟ್ಟಿ ನೀಡುವ ಬಗ್ಗೆ ಮಾಹಿತಿ ಪಡೆಯಲು ಮಂಡಳಿ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಲಿದೆ. ಈ ವರ್ಷ ನೀರು ಬಿದ್ದರೆ ಹಾಳಾಗದಂತಹ ಮುಂದಿನ ವರ್ಷ ಟೀರ್ ಪ್ರೂಫ್ ಮತ್ತು ಅದಕ್ಕಿಂತ ಮುಂದಿನ ವರ್ಷ ಫೈರ್ ಪ್ರೂಫ್ ಅಂಕಪಟ್ಟಿಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ಮಂಡಳಿ ಮುಂದಾಗಿದೆ.

SCROLL FOR NEXT