ಬೆಂಗಳೂರು: ನಟ, ಮಾಜಿ ಸಚಿವ ಅಂಬರೀಷ್ ನಿಧನದ ಹಿನ್ನಲೆಯಲ್ಲಿ ರಾಜ್ಯದಲ್ಲಿ 3 ದಿನಗಳ ಕಾಲ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಅಂತ್ಯಕ್ರಿಯೆಯನ್ನು ಸೋಮವಾರ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಸಲು ತೀರ್ಮಾನಿಸಿದೆ. ಆದರೆ, ಅಂತ್ಯಕ್ರಿಯೆ ಎಲ್ಲಿ ನಡೆಯಬೇಕೆಂಬ ಬಗ್ಗೆ ರಾಜ್ಯ ಸರ್ಕಾರ ಹಾಗೂ ಅಂಬರೀಷ್ ಕುಟುಂಬದ ನಡುವೆ ಇನ್ನೂ ಒಮ್ಮತ ಮೂಡಿ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕರುನಾಡಿನ ಕರ್ಣ ಎನಿಸಿಕೊಂಡಿರುವ ಅಂಬರೀಷ್ ಅವರ ಸ್ಮಾರಕವನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಅಂತ್ಯಕ್ರಿಯೆಯನ್ನೂ ಬೆಂಗಳೂರಿನಲ್ಲಿಯೇ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆದರೆ, ಅಂಬರೀಷ್ ಕುಟುಂಬ ಅಂತ್ಯಕ್ರಿಯೆಯನ್ನು ಮಂಡ್ಯ ಜಿಲ್ಲೆಯಲ್ಲಿರುವ ಅಂಬರೀಷ್ ಅವರ ಸ್ವಗ್ರಾಮದಲ್ಲಿಯೇ ನಡೆಸುವ ಉದ್ದೇಶ ಹೊಂದಿದೆ.
ಅಲ್ಲದೆ, ಮಂಡ್ಯದ ಜನತೆ ಕೂಡ ಅಂಬರೀಷ್ ಅವರ ಅಂತ್ಯಕ್ರಿಯೆ ಮಂಡ್ಯದಲ್ಲಿಯೇ ನಡೆಯಬೇಕೆಂದು ಪಟ್ಟು ಹಿಡಿಯುವ ಸಂಭವವಿರುವುದರಿಂದ ಪ್ರಸ್ತುತ ಸರ್ಕಾರ ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದರೂ, ಇದು ಬದಲಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಇನ್ನು ಅಂಬರೀಷ್ ಗೌರವಾರ್ಥ ಭಾನುವಾರದಿದ 3 ದಿನಗಳ ಕಾಲ ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಸೋಮವಾರ ಕನಕದಾಸ ಜಯಂತಿಯನ್ನು ಆಚರಣೆ ಮಾಡದಿರಲು ನಿರ್ಧರಿಸಿದೆ.
ಭಾನುವಾರ ಸಾರ್ವಜನಿಕ ರಜೆ ಮತ್ತು ಸೋಮವಾರ ಕನಕದಾಸ ಜಯಂತಿ ಪ್ರಯುಕ್ತ ಸರ್ಕಾರಿ ರಜೆ ಇದೆ. ಹೀಗಾಗಿ ರಜೆ ಘೋಷಣೆ ಮಾಡುವ ಅಗತ್ಯ ಇಲ್ಲ. ಅಂಬರೀಷ್ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನಲ್ಲೇ ನೆರವೇರಿಸಲಾಗುವುದು ಎಂದು ಕುಮಾರಸ್ವಾಮಿಯವರು ತಿಳಿಸಿದ್ದಾರೆ.