ಮಂಡ್ಯ ಬಸ್ ದುರಂತ: ಮೃತದೇಹಗಳ ನೋಡಿ ಕಣ್ಣೀರಿಟ್ಟ ಸಿಎಂ ಕುಮಾರಸ್ವಾಮಿ
ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಸಂಭವಿಸಿದ ಭೀಕರ ಬಸ್ ದುರಂತದ ಸುದ್ದಿ ಕೇಳುತ್ತಿದ್ದಂತೆಯೇ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಘಟನಾ ಸ್ಥಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಮೃತದೇಹಗಳನ್ನು ಕಂಡು ಕಣ್ಣೀರಿಟ್ಟರು.
ಖಾಸಗಿ ಬಸ್ ವೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಬಿದ್ದ ಪರಿಣಾಮ 9 ಮಂದಿ ಸೇರಿ ಒಟ್ಟು 30 ಮಂದಿ ಜೀವಂತ ಜಲಸಮಾಧಿಯಾಗಿದ್ದು, ಇಡೀ ಮಂಡ್ಯವನ್ನೇ ಶೋಕಸಾಗರದಲ್ಲಿ ಮುಳುಗಿಸಿದ ಈ ಹೃದಯವಿದ್ರಾವಕ ಘಟನೆಯಲ್ಲಿ ಬಸ್ ನಲ್ಲಿದ್ದ ಬಾಲಕ ಸೇರಿ ಇಬ್ಬರು ಪವಾಡ ರೀತಿಯಲ್ಲಿ ಬದುಕುಳಿದಿದ್ದಾರೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕ ಇಬ್ಬರೂ ಜೀವ ಉಳಿಸಿಕೊಂಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಕಚೇರಿ ಕೆಲಸ ಹಾಗೂ ಇತರೆ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಕುಮಾರಸ್ವಾಮಿಯವರು ಮೃತ ಕುಟುಂಬಸ್ಥರನ್ನು ಭೇಟಿ ಮಾಡಿದರು. ಈ ವೇಳೆ ಮೃತರನ್ನು ನೋಡಿ ತೀವ್ರವಾಗಿ ಭಾವುಕರಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಲು ನಿರಾಕರಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡುವ ಮನಸ್ಥಿತಿಯಲ್ಲಿ ನಾನಿಲ್ಲ ಎಂದು ಹೇಳಿದರು.
ಬಳಿಕ ಪತ್ರಕರ್ತರು ಹಾಗೂ ಕ್ಯಾಮೆರಾ ಮೆನ್ ಗಳನ್ನು ನೂಕಲು ಪೊಲೀಸರು ಯತ್ನಿಸಿದಾಗ ಮಧ್ಯೆ ಪ್ರವೇಶ ಮಾಡಿದ ಜಿಲ್ಲಾ ಸಚಿವ ಸಿ.ಎಸ್. ಪುಟ್ಟರಾಜು ಅವರು, ಸಿಎಂ ಮನವೊಲಿಸಿ ಮಾತನಾಡುವಂತೆ ಒತ್ತಾಯಿಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿದರು. ಅಲ್ಲದೆ, ಸಾರಿಗೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos