ಮಂಡ್ಯ: ಮದ್ದೂರು ತಾಲೂಕಿನ ದೊಡ್ಡರಸಿನಕೆರೆಯಲ್ಲಿ ಸ್ಮಶಾನ ಮೌನ, ಬಸ್ ಅಪಘಾತದಲ್ಲಿ 30 ಮಂದಿ ಸಾವನ್ನಪ್ಪಿದ ಆಘಾತಕಾರಿ ಸುದ್ದಿ ಕೇಳಿ ತಲ್ಲಣ ಗೊಂಡಿದ್ದ ಗ್ರಾಮಸ್ಥರಿಗೆ ಅಂಬರೀಷ್ ಸಾವಿನ ಸುದ್ದಿ ಬರ ಸಿಡಿಲಿನಂತೆ ಬಂದೆರಗಿತ್ತು. ಅಂಬರೀಷ್ ಹುಟ್ಟೂರು ದೊಡ್ಡರಸಿನಕರೆಯಲ್ಲಿ ನೀರವ ಮೌನ ಆವರಿಸಿತ್ತು.
ಅಂಬರೀಶ್ ನಾಯಕನಾಗಿ ಬೆಳೆದ್ದು , ಅಂಬಿಯ ರೀಲ್ ಹಾಗೂ ರಿಯಲ್ ಜೀವನದ ಹಲವು ಘಟನೆಗಳನ್ನು ಅವರ ಸ್ನೇಹಿತರು ಹಾಗೂ ಹಿತೈಷಿಗಳು ಸ್ಮರಿಸಿದ್ದಾರೆ.
ಬೇಡಿದವರಿಗೆ ಅಂಬರೀಷ್ ಹೇಗೆ ಮುಕ್ತವಾಗಿ ಸಹಾಯ ಮಾಡುತ್ತಿದ್ದರು ಎಂಬುದು ಈ ಗ್ರಾಮದ ಪ್ರತಿ ಮನೆಯವರಿಗೂ ತಿಳಿದಿದೆ, ನಾನು ಒಮ್ಮೆ ಅಡುಗೆ ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡುವಂತೆ ಮನವಿ ಮಾಡಲು ಅಂಬರೀಷ್ ತಂಗಿದ್ದ ಹೋಟೆಲ್ ಗೆ ಹೋಗಿದ್ದೆ. ಅವರನ್ನು ಭೇಟಿ ಮಾಡಿದ ಕೆಲವು ದಿನಗಳಲ್ಲೇ ನನಗೆ ಗ್ಯಾಸ್ ಕನೆಕ್ಷನ್ ದೊರಕಿತು ಎಂದು ಜಯರಾಮು ಎಂಬುವರು ಹೇಳಿದ್ದಾರೆ.
ತಮ್ಮ ಮಗಳ ವಿಧ್ಯಾಭ್ಯಾಸಕ್ಕೆ ಅಂಬರೀಷ್ ಹಣ ಸಹಾಯ ಮಾಡಿದ್ದರು ಎಂದು ಮತ್ತೊಬ್ಬ ಗ್ರಾಮಸ್ಥ ಮರಿಸ್ವಾಮಿ ಎಂಬುವರು ಹೇಳಿದ್ದಾರೆ. ಹಲವು ಬಡಜನತೆಯ ಮಕ್ಕಳಿಗೆ ಸಹಕಾರ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಲಂಚ ನೀಡದೇ ಕೆಲಸ ಕೊಡಿಸಲು ಅಂಬರೀಷ್ ಸಹಾಯ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಂಡ್ಯದಲ್ಲಿ ಅಂಬೇಡ್ಕರ್ ಭವನ, ರೀಡಿಂಗ್ ಹಾಲ್, ರಸ್ತೆ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನ ಮಾಡಿದ್ದಾರೆ.
ಅಂಬರೀಷ್ ಅವರಿಗೆ ಸಹಾಯ ಮಾಡುವ ದೊಡ್ಡ ಮನಸ್ಸಿತ್ತು, ಆದರೆ ಅವರ ಸುತ್ತ ಮುತ್ತ ಇದ್ದವರು ಅವರನ್ನು ಬಿಡಲಿಲ್ಲ,. ಕಂಠೀರವ ಸ್ಟುಡಿಯೋದಲ್ಲಿ ಅವರ ಅಂತ್ಯ ಸಂಸ್ಕಾರ ಮಾಡುವ ಬದಲು ದೊಡ್ಡರಸಿನಕೆರೆಯಲ್ಲಿರುವ ಅಂಬರೀಷ್ ಅವರಿಗೆ ಸೇರಿದ ಆರೂವರೆ ಎಕರೆ ಜಮೀನಿನಲ್ಲಿ ಸಂಸ್ಕಾರ ನೆರವೇರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಂಬರೀಷ್ ತಮ್ಮ ಹೆಸರಿನಲ್ಲಿದ್ದ ಜಮೀನನ್ನು ಈಗಾಗಲೇ ತಮ್ಮ ಮಗನ ಹೆಸರಿಗೆ ವರ್ಗಾಯಿಸಿದ್ದಾರೆ, ಅವರ ಸಂಬಂಧಿ ಕೆ.ಎಲ್ ಗೌಡ ಎಂಬುವರು ಅದರಲ್ಲಿ ಕೃಷಿ ಮಾಡುತ್ತಿದ್ದಾರೆ, ಅವರ ಸಂಬಂಧಿಕರು ಬೆಂಗಳೂರಿನಲ್ಲಿ ನಡೆಯುವ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೋಳ್ಳಲು ಈಗಾಗಲೇ ಮಂಡ್ಯದಿಂದ ತೆರಳಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.