ನವದೆಹಲಿ: ವಿಚಾರವಾದಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆಯನ್ನು ವಿಳಂಬವಾಗುತ್ತಿರುವುದಕ್ಕೆ ಸೋಮವಾರ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ತನಿಖೆ ವಿಳಂಬ ಪ್ರಶ್ನಿಸಿ ಎಂ.ಎಂ. ಕಲಬುರ್ಗಿ ಅವರ ಕುಟುಂಬ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ರೊಹಿಂಟನ್ ನಾರಿಮನ್ ನೇತೃತ್ವದ ದ್ವಿಸದಸ್ಯ ಪೀಠ, ತನಿಖೆ ಮಾಡಲು ಸರ್ಕಾರಕ್ಕೆ ಇನ್ನು ಎಷ್ಟು ಸಮಯ ಬೇಕು? ತನಿಖೆಗೆ ವಿಳಂಬ ಆಗುತ್ತಿರುವುದಾದರೂ ಏಕೆ? ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಕೋರ್ಟ್,, ಇನ್ನು ಎರಡು ವಾರದೊಳಗೆ ತನಿಖೆಯ ಸಂಪೂರ್ಣ ವಿವರ ನೀಡುವಂತೆ ಸೂಚಿಸಿದೆ.
2015, ಆಗಸ್ಟ್ 30ರಂದು ಬೆಳಗ್ಗೆ ಧಾರವಾಡದ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ಮನೆಗೆ ಬಂದಿದ್ದ ಅಪರಿಚಿತರು, ಬೆಲ್ ಮಾಡಿದ್ದರು. ಕಲಬುರ್ಗಿ ಅವರು ಬಾಗಿಲು ತೆರೆದಾಗ ಎರಡು ಸುತ್ತು ಗುಂಡು ಹಾರಿಸಿ ಅವರನ್ನು ಹತ್ಯೆ ಮಾಡಿದ್ದರು.
ರಾಜ್ಯ ಸರ್ಕಾರ ಕಲಬುರ್ಗಿ ಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಮೂರು ವರ್ಷಗಳು ಕಳೆದರೂ ಯಾವೊಬ್ಬ ಆರೋಪಿಯನ್ನು ಬಂಧಿಸಲು ಸಾಧ್ಯವಾಗಲಿಲ್ಲ.