ರಾಜ್ಯ

ಬೆಂಗಳೂರು: ರೌಡಿಗಳ ಉಪಟಳ ನಿಯಂತ್ರಿಸುವಂತೆ ಬನಶಂಕರಿ ನಿವಾಸಿಗಳ ಒತ್ತಾಯ!

Nagaraja AB

ಬೆಂಗಳೂರು: ರೌಡಿಗಳ ಉಪಟಳವನ್ನು ನಿಯಂತ್ರಿಸುವಂತೆ  ಬನಶಂಕರಿ ಎರಡನೇ ಹಂತದ ನಿವಾಸಿಗಳು  ಅಪರಾಧ ವಿಭಾಗಕ್ಕೆ ಹೊಸದಾಗಿ ವರ್ಗಾವಣೆಯಾಗಿರುವ   ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಖಡಕ್ ಅಫೀಸರ್  ಅಲೋಕ್ ಕುಮಾರ್ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಬಿಬಿಎಂಪಿ- 180ರ ವಾರ್ಡ್ ನ ನಾಗರಿಕ ಸಂಘಟನೆಗಳು  ಅಲೋಕ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ದಿವಾನ್ ಆಲಿ ಸಹೋದರರು ಹಾಗೂ ಅವರ ಸಹಚರರ ಉಪಟಳ ಹೆಚ್ಚಾಗಿದೆ. ರೌಡಿ ಅಕ್ಬರ್ ಹಾಗೂ ರೌಡಿ ಆಶಿಪ್ ಹಾಗೂ ಅವರ ಬೆಂಬಲಿಗರ ಸರಗಳ್ಳತನ, ಹಪ್ತಾ ಪಸೂಲಿ, ಮತ್ತಿತರ ಕೃತ್ಯ ಎಸಗುವ ಮೂಲಕ ನಿವಾಸಿಗಳಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆ ರೌಡಿಗಳನ್ನು ಪ್ರಶ್ನಿಸಿದ್ದರೆ  ಮೂರು ಪಿಸ್ತೂಲ್, ಬುಲೆಟ್ ತೋರಿಸುವ ಮೂಲಕ ಜೀವ ಬೆದರಿಕೆ ಹಾಕುತ್ತಾರೆ ಎಂದು ಹೇಳಲಾಗಿದೆ. ಈ ಸಂಬಂಧ ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಬಳಿ ದೂರು ನೀಡಿದ್ದರೆ, ಅವರೆಲ್ಲರಿಗೆ ರಾಜಕೀಯ ಸಂಪರ್ಕ ಚೆನ್ನಾಗಿದೆ ಎಂದು ಕೈ ಚೆಲ್ಲುತ್ತಾರೆ.  ರೌಡಿಗಳನ್ನು ಬಂಧಿಸದಂತೆ  ಸಚಿವರೊಬ್ಬರು  ನೆರವು ನೀಡುತ್ತಿದ್ದಾರೆ ಎಂದು  ಪತ್ರದಲ್ಲಿ ಆರೋಪಿಸಲಾಗಿದೆ.

ಯಾರಬ್ ನಗರ ಮುಖ್ಯರಸ್ತೆಯಲ್ಲಿ ಸೇರುವ ಈ ಗುಂಪು ಬನಶಂಕರಿ ಸುತ್ತಮುತ್ತಲಿನ ನಾಗರಿಕರಿಗೆ ತೊಂದರೆ ನೀಡುತ್ತಾರೆ ಎಂದು ನಾಗರಿಕರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ. ಪ್ರತಿದಿನವೂ ಸರಗಳ್ಳತನ ಮತ್ತಿತರ ಕೃತ್ಯ ಮಾಡುತ್ತಾರೆ. ಸಂಜೆ ವೇಳೆಯಲ್ಲಿ ಹುಡುಗಿಯರನ್ನು ಮನೆಯಿಂದ ಹೊರಗೆ ಕಳುಹಿಸಲು ಆಗುತ್ತಿಲ್ಲ. ಅಲೋಕ್ ಕುಮಾರ್ ಈ ಬಗ್ಗೆ ಏನಾದರೂ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ನಿವೃತ್ತ ಶಿಕ್ಷಕಿ ನೂರುನ್ನೀಸಾ ಬೇಗಂ ಹೇಳಿದ್ದಾರೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅಲೊಕ್ ಕುಮಾರ್, ಈ ದೂರಿನ ಬಗ್ಗೆ ಗಮನ ಹರಿಸಲಾಗುವುದು, ನಾಪತ್ತೆಯಾಗಿರುವ ರೌಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

SCROLL FOR NEXT