ವಿಜಯಪುರ: ಸಾಮಾಜಿಕ ಬಹಿಷ್ಕಾರದಿಂದ ಬೇಸತ್ತು ಯುವತಿಯೊರ್ವಳು ಫೇಸ್‍ಬುಕ್ ಲೈವ್‌ನಲ್ಲಿ ತನ್ನ ಅಳಲನ್ನು ತೊಡಿಕೊಂಡು ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಹಂಚಿನಾಳ ಗ್ರಾಮದ ನಿವಾಸಿ ಲತಾ ಚಂದು ಚವ್ಹಾಣ್ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ತಮ್ಮ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವುದಕ್ಕೆ ನೊಂದು ಫೇಸ್‍ಬುಕ್ ಲೈವ್‌ನಲ್ಲಿ ತನ್ನ ಅಳಲನ್ನು ತೊಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಸದ್ಯ ಆಕೆಗೆ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಮಾಜಿಕ ಬಹಿಷ್ಕಾರದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು ಅವರಿಂದ ಯಾವುದೇ ರೀತಿಯ ಭರವಸೆ ಸಿಗದಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಯುವತಿ ಹೇಳಿಕೊಂಡಿದ್ದಾಳೆ.
ಜಮೀನು ವಿವಾಹ ಹಿನ್ನೆಲೆಯಲ್ಲಿ ನಮ್ಮ ಗ್ರಾಮದ ಸರಂಪಚರು ನಮ್ಮನ್ನು ಐದು ವರ್ಷಗಳಿಂದ ಸಾಮಾಜಿಕವಾಗಿ ಬಹಿಷ್ಕಾರ ಮಾಡಿದ್ದಾರೆ. ಈ ಬಗ್ಗೆ ನಾವು ಸಿಪಿಐ, ಪಿಎಸ್ಐ, ಎಸ್ಪಿ, ಡಿಸಿಗೆ ದೂರು ನೀಡಿದ್ದೇವು. ಆದರೆ ಯಾರೂ ನಮ್ಮ ದೂರು ಪರಿಗಣಿಸಲಿಲ್ಲ. ಅವರು ಬೆದರಿಸುತ್ತಲೇ ಇದ್ದರು. ನಾವು ಯಾಕೆಂದು ಕೇಳಿದಾಗ ಮಾಜಿ ಸಚಿವ, ಹಾಲಿ ಶಾಸಕ ಎಂಬಿ ಪಾಟೀಲ್ ಅವರ ಹೆಸರು ಹೇಳುತ್ತಿದ್ದರು. ಆಗ ನಾವು ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದವು. ಆದರೆ ಇಲ್ಲಿನ ಅಧಿಕಾರಿಗಳು ಆ ಸೂಚನೆಗಳಿಗೂ ಕ್ಯಾರೆ ಎನ್ನುತ್ತಿರಲಿಲ್ಲ.
ನಾನು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿನಿ. ನನ್ನ ಹಾಗೂ ನನ್ನ ತಮ್ಮನ ಶಿಕ್ಷಣಕ್ಕಾಗಿ ನನ್ನ ತಂದೆ ಬಹಳ ಕಷ್ಟ ಪಟ್ಟಿದ್ದಾರೆ. ಆದರೆ ಕೋರ್ಟ್ ಕಚೇರಿ ಅಲೆದಾಟದಲ್ಲಿ 10 ತಿಂಗಳ ಹಿಂದೆ ಕಾಲೇಜು ಬಿಟ್ಟಿದ್ದೇನೆ. ಆದರೂ ನಮ್ಮ ವಿರೋಧಿಗಳಿಗೆ ನೆಮ್ಮದಿ ಇಲ್ಲ. ನಾನು ಎಂಬಿ ಪಾಟೀಲ್ ಅವರಿಗೆ ಫೋನ್ ಮಾಡಿದ್ದೆ. ಆಗ ಅವರು ನೀನು ಮನೆಗೆ ಬಾ, ಸರಪಂಚರನ್ನು ಕರೆಯಿಸಿ ನ್ಯಾಯ ಮಾಡುತ್ತೇನೆ ಎಂದಿದ್ದರು. ಆಗ ನಾನು ನನ್ನ ತಂದೆ, ತಮ್ಮ ಹಾಗೂ ಅಜ್ಜಿಯ ಜೊತೆ ಎಂಬಿ ಪಾಟೀಲ್ ಅವರ ಮನೆಗೆ ಹೋಗಿದ್ದೆ. ಅಲ್ಲಿ ನಾನು ನಡೆದ ವಿಷಯ ತಿಳಿಸಿ ಸರ್ ಈ ಆರೋಪಿಗಳು ನಿಮ್ಮ ಹೆಸರು ಹೇಳಿ ಬೆದರಿಸುತ್ತಿದ್ದಾರೆ ಎಂದು ತಿಳಿಸಿದೆ. ಆಗ ಪಾಟೀಲ್ ಅವರು, ನೀವು ನನ್ನ ಹೆಸರು ಹೇಳಿ ಎಂದು ಹೇಳಿದರು. ನಾನೇನು ಎಂಬಿ ಪಾಟೀಲ ಹೆಸರು ಹೇಳಿ ಗೂಂಡಾಗಿರಿ ಮಾಡಬೇಕಾ? ಪ್ರಶ್ನಿಸಿದ್ದಾಳೆ.
ಇದೇ ವೇಳೆ ನಾನು ನರೇಂದ್ರ ಮೋದಿ ಅವರಿಗೆ ಕೈ ಮುಗಿದು ಕೇಳುತ್ತೇನೆ. ತಾವು ಅಲ್ಲಿ ಕುಳಿತು ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತೀರಿ. ನಾನು ಮಗಳಲ್ಲವೇ? ನನಗೆ ಓದುವ ಹಕ್ಕಿಲ್ಲವೇ? ನಾನು ಕಾಲೇಜು ಬಿಟ್ಟೆ, ನನ್ನ ಕನಸುಗಳು ನುಚ್ಚು ನೂರಾಗಿವೆ. ಈ ಹಿನ್ನೆಲೆಯಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದೇನೆ ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.