ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್
ಬೆಂಗಳೂರು: ನಗರದ ವಿವಿಧೆಡೆ ಮಂಗಳವಾರ ತಡರಾತ್ರಿವರೆಗೂ ರಸ್ತೆ ಗುಂಡಿ ದುರಸ್ತಿ, ಬೀದಿ ದೀಪ ನಿರ್ವಹಣೆ, ಚರಂಡಿ ಕಾಮಗಾರಿಗಳ ವೀಕ್ಷಣೆ ನಡೆಸಿದ ನೂತನ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ನಿರ್ಲಕ್ಷ್ಯ ವಹಿಸಿದ್ದ ಇಬ್ಬರು ಗುತ್ತಿಗೆದಾರರಿಗೆ ದಂಡ ವಿಧಿಸಿದ್ದಾರೆ.
ರಾತ್ರಿ 10ಗಂಟೆ ಸುಮಾರಿಗೆ ಉಪ ಮೇಯರ್ ರಮೀಳಾ ಉಮಾಶಂಕರ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಬಿಬಿಎಂಪಿ ಅಧಿಕಾರಿಗಳೊಂದಿಗೆ ದ್ವಿಚಕ್ರ ವಾಹನದಲ್ಲಿಯೇ ಜಯಮಹಲ್, ಗಂಗಾನಗರ, ಶಾಂತಿನಗರ ಸೇರಿದಂತೆ ಹಲವೆಡೆ ಮೇಯರ್ ಗಂಗಾಂಬಿಕೆಯವರು ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಈ ವೇಳೆ ಜಯಮಹಲ್ ವ್ಯಾಪ್ತಿಯಲ್ಲಿ ಬೆಂಗಳೂರು ಅರಮನೆ ಸಮೀಪ ರಸ್ತೆ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚದಿರುವುದನ್ನು ಕಂಡು ತಕ್ಷಣ ಅಧಿಕಾರಿಗಳನ್ನು ಕರೆದು ರಸ್ತೆ ಗುಂಡಿ ಮುಚ್ಚಲು ವೈಜ್ಞಾನಿಕ ಕ್ರಮ ಅನುಸರಿಸದಿರುವುದು ಕಂಡು ಬರುತ್ತಿದೆ. ಸಂಬಂಧ ಪಟ್ಟ ಗುತ್ತಿಗೆದಾರರಿಗೆ ರೂ.1 ಲಕ್ಷ ದಂಡ ವಿಧಿಸುವಂತೆ ಆದೇಶಿಸಿದರು.
ಬಳಿಕ ಪೂರ್ವ ವಲಯದಲ್ಲಿ ಬೀದಿ ಪೀದ ಬೆಳಗದಿರುವುದನ್ನು ಗಮನಿಸಿ ಎಲೆಕ್ಟ್ರಿಕ್ ಗುತ್ತಿಗೆದಾರರಿಗೂ ರೂ.50 ಸಾವಿರ ದಂಡಕ್ಕೆ ಸೂಚನೆ ನೀಡಿದರು.
ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ ಗಂಗಾಂಬಿಕೆಯವರು, ಅಕ್ಟೋಬರ್ ತಿಂಗಳಿನಲ್ಲಿ ಮಳೆ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳ ಕುರಿತಂತೆ ಮಾತುಕತೆ ನಡೆಸಲು ಸಭೆ ನಡೆಸಲಾಯಿತು. ಸಭೆಯಲ್ಲಿ ಪ್ರಗತಿಯಲ್ಲಿರುವ ಕಾರ್ಯಗಳು ಹಾಗೂ ಬಾಕಿ ಉಳಿದಿರುವ ಕಾರ್ಯಗಳ ಕುರಿತಂತೆ ಮಾತುಕತೆ ನಡೆಸಲಾಯಿತು ಎಂದು ಹೇಳಿದ್ದಾರೆ.