ಬೆಂಗಳೂರು: ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿದ್ದ ಕರ್ನಾಟಕ 2018ನೇ ಸಾಲಿನಲ್ಲೂ ಜನವರಿಯಿಂದ ಆಗಸ್ಟ್ ವರೆಗೆ ರೂ.79,866 ಕೋಟಿ ಬಂಡವಾಳ ಹೂಡಿಕೆಯೊಂದಿದೆ ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ.
ಕೇಂದ್ರ ಸರ್ಕಾರದ ಕೈಗಾರಿಕಾ ನೀತಿ ಮತ್ತು ಪ್ರೋತ್ಸಾಹ ಇಲಾಖೆ ಮಾಹಿತಿ ಪ್ರಕಾರ 2013ರಲ್ಲಿ ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿದ್ದ ಕರ್ನಾಟಕ, 2014 ಮತ್ತು 2015ರಲ್ಲಿ ಕ್ರಮವಾಗಿ 5 ಮತ್ತು 4ನೇ ಸ್ಥಾನ ಪಡೆದುಕೊಂಡಿತ್ತು. 2016ರಲ್ಲಿ 1.54 ಲಕ್ಷ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನ ಏರಿತ್ತು. ಇದಾದ ಬಳಿಕ 2017ರಲ್ಲೂ ರೂ.1.41 ಲಕ್ಷ ಕೋಟಿ ಬಂಡವಾಳ ಹೂಡಿಕೆಯೊಂದಿಗೆ ಪ್ರಥಮ ಸ್ಥಾನದಲ್ಲಿಯೇ ಇತ್ತು. ಇದೀಗ 2018ನೇ ಸಾಲಿನಲ್ಲೂ ರೂ.79,866 ಕೋಟಿ ಬಂಡವಾಳ ಹೂಡಿಕೆಯೊಂದಿಗೆ ತನ್ನ ಪ್ರಥಮ ಸ್ಥಾನವನ್ನು ಉಳಿಸಿಕೊಂಡಿದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಬಂಡವಾಳ ಹೂಡಿಕೆಯಲ್ಲಿ ರಾಜ್ಯ ಮತ್ತೆ ಮೊದಲನೇ ಸ್ಥಾನ ಪಡೆದುಕೊಂಡಿರುವುದು ಉತ್ತಮವಾದ ಬೆಳವಣಿಗೆ. ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಗೊಳ್ಳಲು ಪ್ರಾಮುಖ್ಯತೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಮತ್ತಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಬಂಡವಾಳದಿಂದ ಲಾಭ ಮಾಡಬೇಕೆಂದು ಹೇಳಿದ್ದಾರೆ.