ಅಧಿಕಾರಿಗಳ ಸಭೆಯಲ್ಲಿ ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಸದ್ಯಕ್ಕೆ ಏರಿಸುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ನಡೆದ ಸಾರಿಗೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗಿನ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸದ್ಯಕ್ಕೆ ಬಸ್ ಪ್ರಯಾಣ ದರವನ್ನು ಏರಿಕೆ ಮಾಡುವುದಿಲ್ಲ. ಸಾರಿಗೆ ಇಲಾಖೆ ಸಮಸ್ಯೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಡೀಸೆಲ್ ದರ 58 ರು.ಗಳಿದ್ದಾಗ ಬಸ್ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಆದರೆ, ಅಲ್ಲಿಂದ ಇಲ್ಲಿವರೆಗೆ ಏರಿಕೆ ಆಗಿಲ್ಲ. ಹೀಗಾಗಿ ಸಾರಿಗೆ ನಿಗಮಗಳಿಗೆ 3000 ಕೋಟಿ ರು. ನಷ್ಟ ಆಗಿದೆ ಎಂದು ಸಿಎಂ ವಿವರಿಸಿದರು.
ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಶೇ.16ರಷ್ಟು ಪ್ರಯಾಣ ದರ ಏರಿಕೆಗೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಈ ಪ್ರಸ್ತಾವನೆ ತಿರಸ್ಕರಿಸಿರುವ ಸಿಎಂ, ನಷ್ಟ ಸರಿದೂಗಿಸಲು ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಈ ಕುರಿತು ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸೂಚನೆ ನೀಡಿದ್ದಾರೆ.