ಬೆಂಗಳೂರು: ನಗರದಲ್ಲಿ ಸುಲಿಗೆಕೋರರ ಹಾವಳಿ ಹೆಚ್ಚಾಗಿದ್ದು, ಪ್ರಯಾಣಿಕರ ಸೋಗಿನಲ್ಲಿ ಆಟೋ ಹತ್ತಿರುವ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಆಟೋ ಚಾಲಕನ ದರೋಡೆ ಮಾಡಿರುವ ಘಟನೆ ಕೇಂದ್ರ ವಿಭಾಗದ ವಿವೇಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಯಲ್ಲಿ ರಿಚ್ ಮಂಡ್ ಟೌನ್ ನಿವಾಸಿ ಮೊಹಮ್ಮದ್ ಆಸೀಫ್ (28) ಎಡಗೈಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸೀಫ್ ಅವರು ಗುರುವಾರ ರಾತ್ರಿ 12.30ರ ಸುಮಾರಿಗೆ ಆಟೋ ನಿಲ್ಲಿಸಿಕೊಂಡು ಮಲಗಿದ್ದರು. ಈ ವೇಳೆ ಸ್ಥಳಕ್ಕೆ ಬಂದಿರುವ ದುಷ್ಕರ್ಮಿಗಳು ಈಜಿಪುರ ವೃತ್ತಕ್ಕೆ ಹೋಗಬೇಕೆಂದು ಎಬ್ಬಿಸಿದ್ದಾರೆ.
ವಿವೇಕನಗರದ ಓಆರ್'ಸಿ ರಸ್ತೆ ಮಾರ್ಗದಲ್ಲಿ ಹೋಗುತ್ತಿದ್ದಂತೆಯೇ ಸಿಗರೇಟ್ ಸೇದಲು ಆಸೀಫ್ ಬಳಿ ಬೆಂಕಿ ಪೊಟ್ಟಣ ಕೇಳಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ನಿರ್ಜನ ಪ್ರದೇಶದಲ್ಲಿ ಆಟೋ ನಿಲ್ಲಿಸುವಂತೆ ತಿಳಿಸಿದ್ದಾರೆ. ಇದರಂತೆ ಆಸೀಫ್ ಆಟೋ ನಿಲ್ಲಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಆಸೀಫ್ ಬಳಿ ಸುಲಿಗೆ ಮಾಡಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಕ್ಕೆ ಹಲ್ಲೆ ನಡೆಸಿ ರೂ.500 ನಗದು, ಮೊಬೈಲ್ ಹಾಗೂ ಪರ್ಸ್ ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ.
ಆದರೂ ಬಿಡದ ಆಸೀಫ್ ದುಷ್ಕರ್ಮಿಗಳನ್ನು ಅಡ್ಡಿ ಹಾಕಿ ಹಣ ವಾಪಸ್ ಪಡೆಯಲು ಯತ್ನಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ದುಷ್ಕರ್ಮಿಗಳು ಮನಸೋ ಇಚ್ಛೆ ಚಾಲಕನನ್ನ ಥಳಿಸಿದ್ದಾರೆ, ಬಳಿಕ ಕೆಳಗೆ ಬಿದ್ದ ಆಸೀಫ್ ಎಡಗೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸುಟ್ಟ ಗಾಯಗಳಿಂದ ಆಸೀಫ್ ಸಹಾಯಕ್ಕಾಗಿ ಕೂಗಾಡಿದ್ದು, ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರು ಕೂಡಲೇ ಆಸೀಫ್ ನನ್ನು ಆಸ್ಪತ್ರೆದೆ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.