ಬೆಂಗಳೂರು: ಹೆಣ್ಣು ಮಗು ಹುಟ್ಟಿತೆಂಬ ಕೋಪಕ್ಕೆ ನಿತ್ಯ ಪತ್ನಿ ಜೊತೆ ಜಗಳವಾಡುತ್ತಿದ್ದ ವ್ಯಕ್ತಿಯೊಬ್ಬ ಕೊನೆಗೆ 20 ದಿನದ ಹಸುಗೂಸನ್ನೇ ಹತ್ಯೆಗೈದಿರುವ ಮನಕಲಕುವ ಘಟನೆ ಬಾಣಸವಾಡಿಯಲ್ಲಿ ನಡೆದಿದೆ.
ನೇಪಾಳ ಮೂಲದ ಗೋಕುಲ್ ಕಾತ್ರಿ (24) ಬಂಧಿತ ಆರೋಪಿಯಾಗಿದ್ದಾನೆ. ಗೋಕುಲ್ ಮತ್ತು ಪತ್ನಿ ಬುಲೆ ಮೂಲತಃ ನೇಪಾಳ ಮೂಲದವರಾಗಿದ್ದಾರೆ.
ಎರಡು ವರ್ಷಗಳ ಹಿಂದೆಯೇ ಪೋಷಕರ ಜೊತೆ ನಗರಕ್ಕೆ ಬಂದಿದ್ದ ಬುಲೆ ಕೂಲೆ ಕೆಲಸ ಮಾಡಿಕೊಂಡಿದ್ದರು. ಒಂದು ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಸಂಬಂಧಿ ಗೋಕುಲ್ ಕಾದ್ರನನ್ನು ಹತ್ತು ತಿಂಗಳ ಹಿಂದೆ ವಿವಾಹವಾಗಿದ್ದರು. ಗೋಕುಲ್ ಸ್ಥಳೀಯ ಈಜುಕೊಳದಲ್ಲಿ ಸ್ವಚ್ಛತಾಗಾರನಾಗಿ ಕೆಲಸ ಮಾಡಿಕೊಂಡಿದ್ದ. ದಂಪತಿ ಬಾಣಸವಾಡಿಯ ಮುನಿಸ್ವಾಪ್ಪ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಪತ್ನಿ ಬಳಿ ಆರೋಪಿ ನಿತ್ಯ ಜಗಳವಾಡುತ್ತಿದ್ದ. ಇನ್ನೂ 20 ದಿನಗಳ ಹಿಂದೆ ಹೆಣ್ಣು ಮಗು ಜನಿಸಿದ ಬಳಿಕ ಜಗಳ ಮತ್ತಷ್ಟು ಹೆಚ್ಚಾಗಿತ್ತು.
ನನಗೆ ಹೆಣ್ಣು ಮಗು ಇಷ್ಟವಿಲ್ಲ ಎಂದು ಕ್ಷುಲ್ಲಕ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಂತೆ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಪತ್ನಿ ಬಳಿ ಆರೋಪಿ ಜಗಳ ತೆಗೆದು ಕೋಪದಲ್ಲಿ ಹಾಸಿಗೆ ಮೇಲೆ ಮಲಗಿದ್ದ ಮಗುವಿಗೆ ಕೈಯಿಂದ ಹೊಡೆದಿದ್ದಾನೆ. ರಕ್ಷಿಸಲು ಬಂದ ಪತ್ನಿಯನ್ನು ತಳ್ಳಿದ್ದಾನೆ.
ಬಳಿಕ ಮಗುವನ್ನು ತೆಗೆದುಕೊಂಡು ಗೋಡೆಗೆ ಅಪ್ಪಳಿಸಿದ್ದಾನೆ. ಮಹಿಳೆ ಚೀರಾಟ ಕೇಳಿ ಸ್ಥಳೀಯರು ಓಡಿ ಬಂದಿದ್ದು, ಅವರ ಸಹಾಯದಿಂದ ಬುಲೆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗುವನ್ನು ತಪಾಸಣೆ ನಡೆಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics