ಮೈಸೂರು : ಇತ್ತೀಚಿಗೆ 35 ವರ್ಷದ ವಿಧವೆಯೊಬ್ಬರನ್ನು ವಿವಾಹವಾಗಿದ್ದ 80 ವರ್ಷದ ನಿವೃತ್ತ ಶಾಲಾ ಶಿಕ್ಷಕನನ್ನು ಆತನ ಮೊದಲ ಪತ್ನಿ ಹಾಗೂ ಮಕ್ಕಳು ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿದೆ. ಗಲಾಟೆ ವೇಳೆ ವಿಧವೆ ಮಹಿಳೆ ಕೂಡಾ ಗಾಯಗೊಂಡಿದ್ದಾರೆ.
ಕವಿ ಹಾಗೂ ಲೇಖಕರೂ ಆಗಿರುವ ಎಂ ಎನ್ ಮೊಹಮ್ಮದ್ ಗೌಜ್ , ತನ್ನ ಮೊದಲ ಹೆಂಡತಿ ಹಾಗೂ ಮಕ್ಕಳಿಂದ ಪ್ರತ್ಯೇಕವಾಗಿದ್ದು, ಇತ್ತೀಚಿಗೆ ನೂರ್ ಅಬಾಜಾ ಎಂಬ ವಿಧವೆಯೊಂದಿಗೆ ವಿವಾಹವಾಗಿ ನಾಗಮಂಗಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಗಾಯಗೊಂಡಿರುವ ವಿಧವೆಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೊಹಮ್ಮದ್ ಗೌಜ್ ನ ಮೊದಲ ಹೆಂಡತಿ ಅಮೀನಾ ಕಾಥೂನಾ, ಹಾಗೂ ಆಕೆಯ ಮಕ್ಕಳು ಸೇರಿದಂತೆ 8 ಮಂದಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಮೀನಾ ಕಾಥೂನಾ ಹಾಗೂ ಅವರ ಕುಟುಂಬ ಸದಸ್ಯರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.