ರಾಜ್ಯ

2 ವರ್ಷದ ಬಳಿಕ ವೃದ್ಧೆಯನ್ನು ಕುಟುಂಬದೊಂದಿಗೆ ಸೇರಿಸಿದ ವೀರ ಯೋಧರು!

Manjula VN
ಹಾಸನ: ಯಾವ ಸಿನಿಮಾಗೂ ಕಡಿಮೆಯಿಲ್ಲದ ಕಥೆಯಿದು. 2 ವರ್ಷಗಳ ಹಿಂದೆ ಹಾಸನದಲ್ಲಿ ನಾಪತ್ತೆಯಾಗಿದ್ದ ವೃದ್ಧೆಯೊಬ್ಬರು ಅಸ್ಸಾಂನಲ್ಲಿ ಪತ್ತೆಯಾಗಿದ್ದು, ರೋಚಕ ಪ್ರಯಾಣ ನಡೆಸಿದ್ದ ಈಕೆಯನ್ನು ದೇಶದ ಗಡಿ ಕಾಯುವ ಯೋಧರು ಕುಟುಂಬದ ಮಡಿಲು ಸೇರಿಸಿದ್ದಾರೆ. 
ಹಾಸನ ಜಿಲ್ಲೆಯ ಮಾದಿಗಾನಹಳ್ಳಿ ಗ್ರಾಮ ಮೂಲದ ಜಯಮ್ಮ ಎಂಬ ಮಹಿಳೆ 2 ವರ್ಷಗಳ ಹಿಂದೆ ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಇದಾದ ಬಳಿಕ ಮನೆಗೆ ಹಿಂತಿರುಗಿರಲಿಲ್ಲ. ಜಯಮ್ಮ ಅವರಿಗಾಗಿ ಕುಟುಂಬಸ್ಥರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಎಲ್ಲಿಯೂ ಜಯಮ್ಮ ಸಿಕ್ಕಿರಲಿಲ್ಲ. 
ಅಕ್ಟೋಬರ್ 18ರ ಬೆಳಿಗ್ಗೆ 5.30ರ ಸುಮಾರಿಗೆ ಮಹಿಳೆಯೊಬ್ಬರು ಕರೀಂಗಂಜ್'ನ ಸುತಾರ್ಕಂಡಿಯಲ್ಲಿರುವ ಗಡಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಒಬ್ಬಂಟಿಯಾಗಿ ಕುಳಿತು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದರು. ಮಹಿಳೆಯ ಭಾಷೆ ಯೋಧರಿಗೆ ಅರ್ಥವಾಗಿಲ್ಲ. ಮಹಿಳೆ ದಕ್ಷಿಣ ಭಾರತದ ಭಾಷೆ ಮಾತನಾಡುತ್ತಿರುವುದು ಯೋಧರಿಗೆ ತಿಳಿದಿದೆ.
ಮಹಿಳೆ ಬಳಿ ತೆರಳಿ, ನೀವು ಎಲ್ಲಿಯವರು? ಎಲ್ಲಿಂದ ಬಂದಿದ್ದೀರಿ ಎಂದು ಯೋಧರು ಪ್ರಶ್ನಿಸಿದ್ದಾರೆ. ಈ ವೇಳೆ ಮಹಿಳೆ ಕನ್ನಡದಲ್ಲಿ ಅವರಷ್ಟಕ್ಕೆ ಅವರೇ ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ. ಬಳಿಕ ಯೋಧರು ನನ್ನ ಬಳಿಕೆ ಕರೆದುಕೊಂಡು ಬಂದಿದ್ದರು. ನಾನು ಕರ್ನಾಟಕ ಮೂಲದವನೇ ಆಗಿದ್ದು, ಕನ್ನಡ ಭಾಷೆ ಬರುತ್ತದೆ. ಹೀಗಾಗಿ ಜಯಮ್ಮ ಅವರ ಬಳಿ ಮಾತನಾಡಿದೆ. ಈ ವೇಳೆ ಆಕೆ ಹಾಸನ ತಾಲೂಕಿನ ಮಾದಿಗಾನಹಳ್ಳಿಯ ಲಕ್ಷ್ಮೇಗೌಡರ ಹೆಂಡತಿ ಜಯಮ್ಮ ಎಂಬುದು ತಿಳಿದುಬಂದಿತ್ತು. ಬಳಿಕ ಆಕೆಯನ್ನು ಕುಟುಂಬದ ಮಡಿಲು ಸೇರಿದೆ ಎಂದು ಯೋಧ ತಹಿಲ್ ಜಬೀವುಲ್ಲಾ ಅವರು ಹೇಳಿದ್ದಾರೆ. 
ಮಹಿಳೆಯೊಬ್ಬರು ಪತ್ತೆಯಾಗಿರುವ ವಿಚಾರ ತಿಳಿದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತಾಹಿಲ್ ಅವರೊಂದಿಗೆ ಜಯಮ್ಮ ಮಾತನಾಡುತ್ತಿರುವುದನ್ನು ವಿಡಿಯೋ ಮಾಡಿಕೊಂಡಿದ್ದರು. ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇದೇ ವೇಳೆ ಬಿಎಸ್ಎಫ್ ಕಮಾಂಡರ್ ಒಬ್ಬರು ಹಾಸನ ಪೊಲೀಸರನ್ನು ಸಂಪರ್ಕಿಸಿದ್ದರು. ಆಗ ಹಾಸನ ಪೊಲೀಸರು ಮಾದಿಗಾನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ಎಂಬುವವರನ್ನು ಕರೆತಂದು ಜಯಮ್ಮ-ಸಂತೋಷ್ ಅವರ ಆನ್'ಲೈನ್ ವಿಡಿಯೋ ಸಂವಾದ ಏರ್ಪಡಿಸಿದರು. ಸಂತೋಷ್ ಅವರು ಈಕೆ ಜಯಮ್ಮನೇ ಎಂದು ಗುರುತು ಪತ್ತೆ ಮಾಡಿ, ಜಯಮ್ಮ ಅವರ ಪುತ್ರಿ ಸುನಂದಾ ಅವರಿಗೆ ವಿಷಯ ತಿಳಿಸಿದರು. 
ಬಳಿಕ ಬಿಎಸ್ಎಫ್ ಅಧಿಕಾರಿಗಳು ಸುನಂದಾ ಹಾಗೂ ಜಯಮ್ಮನ ವಿಡಿಯೋ ಸಂವಾದವನ್ನು ಏರ್ಪಡಿಸಿದರು. ಈಕೆ ನಮ್ಮ ಅಮ್ಮ ಎಂದು ಸುನಂದಾ ಅವರು ಖಚಿತಪಡಿಸಿದರು. 
2016ರ ಡಿಸೆಂಬರ್ 25 ರಂದು ನನ್ನ ತಾಯಿ ಮನೆಬಿಟ್ಟು ಹೋಗಿದ್ದರು. ಈ ವೇಳೆ ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆ. ಆದರೆ, ಆಕೆ ಸಿಕ್ಕಿರಲಿಲ್ಲ. ನಾನು ಸಲಿಂಗಿಯಾಗಿದ್ದು, ಜನರು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದರು. ನನ್ನ ತಾಯಿ ಅಸ್ಸಾಂಗೆ ಹೇಗೆ ತಲುಪಿದರು ಎಂಬುದು ನನಗೆ ತಿಳಿಯುತ್ತಿಲ್ಲ. ಅದೃಷ್ಟವಶಾತ್ ಅವರು ಯೋಧರ ಕೈಗೆ ಸಿಕ್ಕಿದ್ದಾರೆಂದು ಜಯಮ್ಮ ಅವರ ಪುತ್ರಿ ಸುನಂದಾ ಅವರು ಹೇಳಿದ್ದಾರೆ. 
ನನ್ನ ತಾಯಿ ಮನೆ ಬಿಟ್ಟು ಹೋಗುವಾಗ ಅವರು 120 ಗ್ರಾಂ ಚಿನ್ನವನ್ನು ಹಾಕಿಕೊಕಂಡಿದ್ದರು. ಆದರೆ, ಕಳ್ಳರು ಅದನ್ನು ದೋಚಿತದ್ದಾರೆ. ಬಳಿಕ ಆಕೆ ಗಡಿಯವರೆಗೂ ನಡೆದು ಹೋಗಿದ್ದಾರೆ. ಹಲವೆಡೆ ಭಿಕ್ಷೆ ಬೇಡಿದ್ದೇನೆಂದು ತಾಯಿ ಹೇಳಿದ್ದಾರೆ. ಕೆಲವರು ಆಕೆಗೆ ಹಿಂಸೆ ನೀಡಿರುವುದು ಹಾಗೂ ತಲೆ ಕೂದಲನ್ನು ಕತ್ತರಿಸಿದ್ದಾರೆಂದು ಆಕೆ ಹೇಳಿಕೊಂಡಿದ್ದಾರೆ. ದೇವರ ದಯೆಯಿಂದ ನನ್ನ ತಾಯಿ ಸಿಕ್ಕಿದ್ದಾರೆ. 
ನಾನು ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ನನ್ನನ್ನು ಕಂಡು ಹಲವರು ಸಲಿಂಗಿ ಎಂದು ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ. ನನ್ನ ತಂದೆ ತಾಯಿಗೆ ಆಗಾಗ ಬೈಯುತ್ತಲೇ ಇದ್ದರು. ಈ ಬಗ್ಗೆ ಇಬ್ಬರ ನಡುವೆ ಜಗಳವಾಗುತ್ತಲೇ ಇತ್ತು. ಜಗಳ ಆದ ದಿನದಂದು ನನ್ನ ತಾಯಿ ಮಾರುಕಟ್ಟೆಗೆ ಹೋಗಿ ಬರುತ್ತೇನೆಂದು ಹೋಗಿದ್ದರು. ಆ ಬಳಿಕ ಮನೆಗೆ ಹಿಂತಿರುಗಿ ಬರಲೇ ಇಲ್ಲ. ಬಳಿಕ ತಾಯಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ತಿರುಪತಿ ಅಥವಾ ಇತರೆ ದೇಗುಲಗಳಿಗೆ ಹೋಗಿರಬಹುದು ಎಂದು ಹುಡುಕಾಟ ನಡೆಸಿದ್ದೆವು. ಆದರೂ ದೊರಕಿರಲಿಲ್ಲ. 8 ತಿಂಗಳ ಹಿಂದೆ ತಂದೆ ಸಾವನ್ನಪ್ಪಿದ್ದರು. ಆಗಲೂ ಹುಡುಕಿದ್ದೆ, ಸಿಕ್ಕಿರಲಿಲ್ಲ. ತಾಯಿ ಇದೀಗ ದೊರಕಿದ್ದು, ಸಾಕಷ್ಟು ನಿಶ್ಯಕ್ತಿಯಿಂದಿದ್ದಾರೆ. 
ಮನೆಗೆ ಬಂದಾಗ ತಾಯಿಯೊಂದಿಗೆ ಮಾತನಾಡಿದ್ದೆ. ಈ ವೇಳೆ ಬೆಂಗಳೂರಿನಲ್ಲಿ ಕಳ್ಳರು ಆಕೆಯ ಚಿನ್ನದ ಆಭರಣಗಳನ್ನು ಕಳವು ಮಾಡಿ, ನಂತರ ಬೆಂಗಳೂರ-ಅಗರ್ತಲಾ ನಡುವಿನ ಹಮ್ಸಫರ್ ರೈಲಿನೊಳಗೆ ಕಳುಹಿಸಿದ್ದರು ಎಂದು ಹೇಳಿಕೊಂಡರು ಎಂದು ಸುನಂದಾ ತಿಳಿಸಿದ್ದಾರೆ. 
ಯೋಧರ ಕಾರ್ಯವನ್ನು ಬಿಎಸ್ಎಫ್ ಡಿಐಜಿ ಎಂ.ಎಲ್.ಗಾರ್ಗ್ ಅವರು ಪ್ರಶಂಸಿಸಿದ್ದಾರೆ. ತಾಹಿಲ್ ಮತ್ತು ಇತರೆ ಯೋಧರು ಅತ್ಯುತ್ತಮ ಕಾರ್ಯವನ್ನು ಮಾಡಿದ್ದಾರೆ. ಅದೃಷ್ಟವಶಾತ್ ಆಕೆ ಇಲ್ಲಿಗೆ ತಲುಪಿದ್ದಾರೆ. ಮಹಿಳೆಯೊಂದಿಗೆ ಮಾತನಾಡಿದ ಬಳಿಕ ತಾಹಿಲ್ ವಿಡಿಯೋ ಮಾಡಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಬಳಿಕ ಹಾಸನ ಪೊಲೀಸರೊಂದಿಗೆ ಮಾತನಾಡಿ, ಮಹಿಳೆಯನ್ನು ಕುಟುಂಬದ ಮಡಿಲು ಸೇರಿಸಲಾಗಿದೆ ಎಂದಿದ್ದಾರೆ. 
ಬಾಲಿವುಡ್ ಸಿನಿಮಾ ರೀತಿಯಂತಿತ್ತು ತಾಯಿ-ಮಗಳು ಒಂದಾದ ದೃಶ್ಯ. ಒಬ್ಬರನ್ನೊಬ್ಬರು ನೋಡಿದ ಕೂಡಲೇ ಇಬ್ಬರೂ ದುಃಖಿ ದುಃಖಿಸಿ ಅಳುತ್ತಿದ್ದರು. ಇಬ್ಬರನ್ನೂ ನೋಡಿ ನಮ್ಮ ಕಣ್ಣಾಲಿಗಳೂ ತುಂಬಿದ್ದವು ಎಂದು ಯೋಧ ತಾಹಿಲ್ ಹೇಳಿದ್ದಾರೆ. 
ಗೆಳತಿ ಸಾನಿಯಾ ಜೊತೆಗೆ ಗುವಾಹಟಿಗೆ ತೆರಳಿ ತಾಯಿಯನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಮಂಗಳವಾರ ತಡರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದು ನಂತರ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದೆ. ಯೋಧರ ಈ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ. ಅವರಿಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ. ತಾಯಿ ಬಿಟ್ಟರೆ ಈ ಪ್ರಪಂಚದಲ್ಲಿ ನನಗೆ ಬೇರಾರೂ ಇಲ್ಲ ಎಂದು ಸುನಂದಾ ಅವರು ಹೇಳಿದ್ದಾರೆ. 
SCROLL FOR NEXT