ರಾಜ್ಯ

ಪಾನಮತ್ತರಾಗಿ ತರಗತಿಗೆ ಹಾಜರ್: ಪೋಷಕರನ್ನು ಕರೆಸಿದ್ದಕ್ಕೆ ಕಾಲೇಜು ಕಟ್ಟಡದಿಂದ ಧುಮುಕಿದ ವಿದ್ಯಾರ್ಥಿಗಳು

Srinivas Rao BV
ಬೆಂಗಳೂರು: ಪಾನಮತ್ತರಾಗಿ ತರಗತಿಗಳಿಗೆ ಹಾಜರಾಗಿದ್ದ ಪ್ರಥಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಕಾಲೇಜು ಕಟ್ಟಡದಿಂದ ಧುಮುಕಿದ್ದಾರೆ. 
ಜಾಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರೂ ವಿದ್ಯಾರ್ಥಿಗಳಿಗೆ ಗಾಯಗಳುಂಟಾಗಿವೆ.  ಅಕ್ಬರ್ (19) ಈ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ದಿನಗೂಲಿ ನೌಕರರಾಗಿದ್ದ  ತನ್ನ ಪೋಷಕರಿಂದಲೇ ಕಿರುಕುಳ ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಮದ್ಯವ್ಯಸನನಾಗಿದ್ದೆ ಎಂದು ಹೇಳಿದ್ದಾರೆ.  ಪೋಷಕರು ನನಗೆ ಪ್ರತಿ ನಿತ್ಯ ಕೆಲಸ ಮಾಡುವಂತೆ ಒತ್ತಡ ಹೇರುತ್ತಿದ್ದರು. ಇದು ನನ್ನ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತಿತ್ತು, ಆದ್ದರಿಂದ ನಾನು ಮದ್ಯ ಸೇವನೆ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ. ಗೌತಮ್ (20) ಎಂಬ ಮತ್ತೋರ್ವ ವಿದ್ಯಾರ್ಥಿಯ ಪೋಷಕರೂ ದಿನಗೂಲಿ ನೌಕರರಾಗಿದ್ದಾರೆ. ಆದರೆ ಈ ವಿದ್ಯಾರ್ಥಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ. ಇಬ್ಬರೂ ವಿದ್ಯಾರ್ಥಿಗಳು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಜಾಲಹಳ್ಳಿಯಲ್ಲಿರುವ ಸೇಂಟ್ ಕ್ಲೆರೆಟ್ ಕಾಲೇಜ್ ನಲ್ಲಿ ಇಬ್ಬರೂ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಸೆ.22 ರಂದು ಮಧ್ಯಾಹ್ನ ತರಗತಿಯಲ್ಲಿ ಇಬ್ಬರೂ ವಿದ್ಯಾರ್ಥಿಗಳು ಪಾನಮತ್ತರಾಗಿರುವುದು ಸಹಪಾಠಿಗಳಿಗೆ ತಿಳಿದು ಪ್ರಾಧ್ಯಾಪಕರ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದ ಕಾಲೇಜು ಪ್ರಾಂಶುಪಾಲರು ಇಬ್ಬರೂ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಮತ್ತೊಮ್ಮೆ ಇಂತಹ ಘಟನೆಗೆ ಅವಕಾಶ ನೀಡದಂತೆ ಎಚ್ಚರಿಕೆ ನೀಡಿದ್ದಾರೆ. ಈ ಬಳಿಕ ಅಕ್ಬರ್ ತನ್ನ ಪೋಷಕರೊಂದಿಗೇ ವಾಗ್ವಾದಕ್ಕೆ ಮುಂದಾಗಿ 2 ನೇ ಮಹಡಿಯಿಂದ ಕೆಳಗೆ ಧುಮುಕಿದ್ದಾನೆ. ಇದನ್ನು ತಿಳಿದ ಗೌತಮ್ ತಾನೂ ಸಹ ತನ್ನ ಸ್ನೆಹಿತನಂತೆಯೇ ಕೆಳಗೆ ಧುಮುಕಿದ್ದಾನೆ. ಘಟನೆಯಲ್ಲಿ ಇಬ್ಬರೂ ವಿದ್ಯಾರ್ಥಿಗಳ ಕಾಲು ಮುರಿದಿದ್ದು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
ಕಾಲೇಜು ಮೂಲಗಳ ಪ್ರಕಾರ ಇಬ್ಬರೂ ವಿದ್ಯಾರ್ಥಿಗಳು ತರಗತಿಗಳಿಗೆ ಸರಿಯಾಗಿ ಹಾಜರಾಗುತ್ತಿದ್ದರು, ಈ ವರೆಗೂ ಒಂದೇ ಒಂದೂ ತರಗತಿಗಳನ್ನೂ ತಪ್ಪಿಸಿರಲಿಲ್ಲ.
SCROLL FOR NEXT