ಪಿಒಕೆನಲ್ಲಿರುವ ಶಾರದಾ ಪೀಠಕ್ಕೆ ತೆರಳಲು ಅವಕಾಶ ನೀಡಿ: ಪ್ರಧಾನಿ ಮೋದಿಗೆ ಶೃಂಗೇರಿ ಜಗದ್ಗುರುಗಳ ಪತ್ರ
ಶೃಂಗೇರಿ: ಮಹತ್ವಪೂರ್ಣ ಬೆಳವಣಿಗೆಯೊಂದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠಕ್ಕೆ ಭಕ್ತರು ತೆರಳುವುದಕ್ಕೆ ಅವಕಾಶ ಒದಗಿಸಬೇಕು ಎಂದು ಕೋರಿ ಶೃಂಗೇರಿ ಶಾರದಾ ಪೀಠದ ಜಗದ್ಗುರು ಭಾರತೀ ತೀರ್ಥರು ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಅಕ್ಟೋಬರ್ 10ರಂದೇ ಈ ಸಂಬಂಧ ಪ್ರಧಾನಿಗಳಿಗೆ ಪತ್ರ ಬರೆದಿದ್ದ ಶ್ರೀಗಳು ವರ್ಷಕ್ಕೆ ಒಮ್ಮೆಯಾದರೂ ಶಾರದಾ ಪೀಠಕ್ಕೆ ತೆರಳಲು ಭಕ್ತಾದಿಗಳಿಗೆ ಅವಕಾಶ ಕಲ್ಪಿಸಬೇಕು. ಈ ಸಂಬಂಧ ಪಾಕಿಸ್ತಾನದೊಡನೆ ಮಾತುಕತೆ ನಡೆಸಬೇಕು ಎಂದು ಬರೆದಿದ್ದಾರೆ.
"ಶಾರದಾ ಫೀಠವು ಭಾರತೀಯರೆಲ್ಲರ ಪಾಲಿಗೆ ಪವಿತ್ರ ಸ್ಥಳವಾಗಿದೆ.ಶಾರದಾಂಬೆ ಶ್ಲೋಕದಲ್ಲಿ ಆಕೆಯನ್ನು ಕಾಶ್ಮೀರ ಪುರವಾಸಿನಿ ಎಂದು ಕರೆಯಲಾಗುತ್ತದೆ. ಆಕೆ ಕಾಶ್ಮೀರದ ಅಧಿದೇವತೆಯಾಗಿದಾಳೆ. ಹಿಂದೆ ಆದಿ ಶಂಕರಾಚಾರ್ಯರು ಕಾಶ್ಮೀರಕ್ಕೆ ತೆರಳಿ ಅಲ್ಲಿನ ಎಲ್ಲಾ ಪಂಡಿತರನ್ನು ಸೋಲಿಸಿ ತಾವು ಸರ್ವಜ್ಞ ಪೀಠವೇರಿದ್ದ ಸ್ಥಳ ಇದಾಗಿದ್ದು ಇಂದು ಅದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಅತ್ಯಂತ ದುಸ್ಥಿತಿಯಲ್ಲಿದೆ" ಎಂದಿದ್ದಾರೆ.
ಭಾರತೀತೀರ್ಥ ಮಹಾಸ್ವಾಮಿಗಳ ಪರ ಶೃಂಗೇರಿ ಮಠದ ಆಡಳಿತಾಧಿಕಾರಿ ಗೌರಿಶಂಕರ್ ಪ್ರಧಾನಿಗಳಿಗೆ ಈ ಪತ್ರ ಬರೆದಿದ್ದಾರೆ.ಶ್ರೀಗಳ ಆಶಯದಂತೆ ಸರ್ವಜ್ಞ ಪೀಠ ಮತ್ತೆ ಪ್ರಾರಂಭವಾಗಬೇಕು. ಭಕ್ತಾದಿಗಳಿಗೆ ಇಲ್ಲಿಗೆ ಪ್ರವೇಶ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಹಿಂದೆ ಕಾಶ್ಮೀರಿಗಳು ಪ್ರತಿ ವರ್ಷ ಆಗಸ್ಟ್ ತಿಂಗಳಿನಲ್ಲಿ ಸರ್ವಜ್ಞ ಪೀಠಕ್ಕೆ ಯಾತ್ರೆ ಕೈಗೊಳ್ಳುವ ಪರಿಪಾಠವಿತ್ತು. ಆದರೆ ಈಗ ಈ ಪ್ರದೇಶ ಪಾಕಿಸ್ತಾನದ ಹಿಡಿತದಲ್ಲಿದ್ದು ಇಲ್ಲಿಗೆ ಯಾತ್ರೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರಧಾನಿಗಳು ಪಾಕಿಸ್ತಾನದೊಡನೆ ಈ ಸಂಬಂಧ ಮಾತುಕತೆ ನಡೆಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಅವರು ಕೇಳಿದ್ದಾರೆ.
ಶೃಂಗೇರಿಗೆ ಕಾಶ್ಮೀರಿ ಪಂಡಿತರ ಭೇಟಿ
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಕ್ಕೆ ಕಾಶ್ಮೀರಿ ಪಂಡಿತರು ಭೇಟಿ ನೀಡಿ ಜಗದ್ಗುರು ಭಾರತೀತೀರ್ಥ ಹಾಗೂ ಕಿರಿಯ ಸ್ವಾಮಿಗಳಾದ ವಿಧುಶೇಖರ ಸ್ವಾಮಿಗಳನ್ನು ಸಂದರ್ಶಿಸಿದ್ದಾರೆ.ಕಾಶ್ಮೀರಿ ಪಂಡಿತರ ಅಭಿವೃದ್ದಿ ಸಮಿತಿ ರಾಜ್ಯಾದ್ಯಂತ ಸಂಚರಿಸಿ ಅನೇಕ ಗುರುಗಳ ಮಾರ್ಗದರ್ಶನ ಹಾಗೂ ಸಲಹೆ ಪಡೆಯುತ್ತಿದ್ದು ಇದೇ ವಿಚಾರವಾಗಿ ಶೃಂಗೇರಿಗೆ ಸಹ ಭೇಟಿ ಣೀಡಿದೆ.ಈ ವೇಳೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಶಾರದಾ ಪೀಠಕ್ಕೆ ತೆರಳಲು ಮುಕ್ತ ಅವಕಾಶ ಒದಗಿಸುವ ಸಂಬಂಧ ಉಭಯ ಶ್ರೀಗಳೊಡನೆ ತಂಡವು ಮಾತುಕತೆ ನಡೆಸಿದೆ.
ಪವಿತ್ರ ಶಾರದಾ ಪೀಠವು ಪಾಕ್ ಆಕ್ರಮಿತ ಕಾಶ್ಮೀರದ ನೀಲಂ ವ್ಯಾಲಿ ಜಿಲ್ಲೆಯ 'ಶಾರದಾ' ಎನ್ನುವ ಗ್ರಾಮದಲ್ಲಿದೆ.ಇದು ಜಮ್ಮು ಕಾಶ್ಮೀರ ರಾಜಧಾನಿ ಶ್ರೀನಗರದಿಂದ 96 ಕಿಮೀ, ಬಾರಾಮುಲ್ಲಾದಿಂದ 67 ಕಿಮೀ ದೂರದಲ್ಲಿದೆ. ಸಧ್ಯ ಪಾಕ್ ಹಾಗೂ ಭಾರತ ಗಡಿರೇಖೆ ಎಲ್ ಓಸಿ ಯಿಂದ ಕೇವಲ 25 ಕಿಮೀ ದೂರದಲ್ಲಿದೆ. ಹಿಂದೆ ಇದೇ ಸ್ಥಳದಲ್ಲಿ ಆದಿ ಶಂಕರಾಚಾರ್ಯರು ಸರ್ವಜ್ಞ ಪೀಠವನ್ನೇರಿದ್ದರು. ಇಲ್ಲೇ ಅವರು "ಪ್ರಪಂಚಸಾರ" ವನ್ನು ರಚಿಸಿ ಶ್ರೀ ಶಾರದಾದೇವಿಯನ್ನು ವರ್ಣಿಸಿದ್ದರು,.