ಬೆಂಗಳೂರು: ವಿಭೂತಿಪುರ ಕೆರೆ ಸಮೀಪ ನಡೆದಿದ್ದ ಬಾಲಕ ಪ್ರವೀಣ್ ಮೇಲಿನ ಬೀದಿ ನಾಯಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿ ಹಾಗೂ ಗುತ್ತಿಗೆದಾರ ಸೇರಿ ಮೂವರನ್ನು ಹೆಚ್ಎಎಲ್ ಠಾಣೆ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಮಹದೇವಪುರವಲಯದ ಸಹಾಯಕ ನಿರ್ದೇಶಕ (ಪಶುಪಾಲನೆ) ಡಾ.ಶ್ರೀರಾಮ್, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಅರುಣ್ ಮುತಾಲಿಕ್ ದೇಸಾಯಿ ಹಾಗೂ ಗುತ್ತಿಗೆದಾರ ರವಿಶಂಕರ್ ಬಂಧಿತರಾಗಿದ್ದಾರೆ.
ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದು ಹಾಗೂ ಅವುಗಳಿಗೆ ರೋಗ ನಿರೋಧಕ ಚುಚ್ಚು ಮದ್ದು ಹಾಕಿಸುವ ವಿಷಯದಲ್ಲಿ ಈ ಮೂವರು ನಿರ್ಲಕ್ಷ್ಯತನ ತೋರಿಸಿದ್ದರು. ವಿಭೂತಿಕೆರೆ ಸಮೀಪ ತಮ್ಮ ಪುತ್ರನ ಮೇಲೆ ನಾಯಿ ದಾಳಿಗೆ ಆಧಿಕಾರಿಗಳೇ ಕಾರಣ ಎಂದು ಆರೋಪಿಸಿ ಪ್ರವೀಣ್ ತಾಯಿ ದೂರು ನೀಡಿದ್ದರು.
ಈ ಹಿನ್ನಲೆಯಲ್ಲಿ ಪ್ರಾಣಿಗಳ ಸಂರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯತನ ತೋರಿದ (ಐಪಿಸಿ 289) ಹಾಗೂ ಆಜಾಗರೂಕತೆಯಿಂದ ಪ್ರಾಣಕ್ಕೆ ಸಂಚಕಾರ ತಂದ (338) ಆರೋಪಗಳಡಿ ಎಫ್ಐಆರ್ ದಾಖಲಾಗಿದೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರವೀಣ್ ಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ನಡುವೆ ಹೋರಟ ನಡೆಸುತ್ತಿದ್ದಾನೆಂದು ತಿಳಿದುಬಂದಿದೆ.