ಬೆಂಗಳೂರು: ವಿದ್ಯಾರ್ಥಿ ವೇತನಕ್ಕಾಗಿ ಹತ್ತು ಹಲವು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಶಿಕ್ಷಣ ಇಲಾಖೆ ರೂಪಿಸಿದ ಪ್ರತ್ಯೇಕ ವೆಬ್ ಪೋರ್ಟಲ್ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ಚಾಲನೆ ನೀಡಿದರು.
ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿದ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್(ಎಸ್ ಎಸ್ ಪಿ) ನಿಂದಾಗಿ ಸುಮಾರು ಮೂರು ಲಕ್ಷ ಶಾಲಾ - ಕಾಲೇಜ್ ವಿದ್ಯಾರ್ಥಿಗಳ ಖಾತೆಗೆ ನೇರವಾಗಿ ಸ್ಕಾಲರ್‌ಶಿಪ್ ಹಣ ಜಮಾ ಆಗಲಿದೆ.
ವೆಬ್ ಪೋರ್ಟಲ್ ಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಶಿಕ್ಷಣ ವ್ಯವಸ್ಥೆ ಬಹಳಷ್ಟು ಸುಧಾರಣೆಯಾಗುವ ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನಾನಾ ಇಲಾಖೆಗಳಡಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಈ ಸೌಲಭ್ಯಕ್ಕಾಗಿ ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸುವ ವಿಧಾನವಿತ್ತು. ಎಷ್ಟೋ ಬಾರಿ ಸ್ಕಾಲರ್‌ಶಿಪ್ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿಯೇ ಇರುತ್ತಿರಲಿಲ್ಲ. ಹಾಗಾಗಿ ಮಕ್ಕಳಿಗೆ ಇದರ ಪ್ರಯೋಜನ ಸರಿಯಾಗಿ ತಲುಪುತ್ತಿರಲಿಲ್ಲ. ಈ ಪೋರ್ಟಲ್ ವಿದ್ಯಾರ್ಥಿಗಳ ಈ ಕೊರತೆಯನ್ನು ನೀಗಿಸಲಿದೆ.
ಇ-ಆಡಳಿತ ಇಲಾಖೆ ಈ ಕುರಿತ ತಂತ್ರಾಂಶ ಅಭಿವೃದ್ಧಿ ಪಡಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಸ್ಕಾಲರ್‌ಶಿಪ್ ಪಡೆಯಲು ಈ ಪೋರ್ಟಲ್ ( https://ssp.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics