ಜೈಲಿನಿಂದ ಬಿಡುಗಡೆಗೊಳ್ಳುತ್ತಿರುವ ಕೈದಿಗಳು
ಬೆಂಗಳೂರು: 2015 ರಿಂದ ಇಲ್ಲಿಯವರೆಗೂ ಸನ್ನಡತೆ ಆಧಾರದ ಮೇಲೆ 1,334 ಕೈದಿಗಳ ಬಿಡುಗಡೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದ್ದಾರೆ.
ಭಾನುವಾರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಸನ್ನಡತೆ ಕೈದಿಗಳ ಅವಧಿಪೂರ್ವ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ,''ರಾಜ್ಯದ ಕಾರಾಗೃಹಗಳಲ್ಲಿ 14 ಸಾವಿರ ಕೈದಿಗಳಿದ್ದಾರೆ. ಆದರೆ ಎಲ್ಲರೂ ಉದ್ದೇಶಪೂರ್ವಕವಾಗಿ ಅಪರಾಧ ಮಾಡುವುದಿಲ್ಲ. ಕೆಲ ಸನ್ನಿವೇಶಗಳಲ್ಲಿ ಕಾನೂನು ಮೀರಿ ನಡೆಯುತ್ತಾರೆ ಎಂದು ಹೇಳಿದರು.
'ಸನ್ನಡತೆ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆಗೊಳಿಸುವುದನ್ನು 2006ರಲ್ಲಿ ರದ್ದುಪಡಿಸಲಾಗಿತ್ತು. 2015ರಲ್ಲಿ ಗೃಹ ಸಚಿವನಾಗಿ ಅಧಿಕಾರ ಹೊಂದಿದ ಬಳಿಕ ಈ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದೆ. ನಂತರ 1,334 ಕೈದಿಗಳು ಸನ್ನಡತೆ ಆಧಾರದಲ್ಲಿ ಬಿಡುಗಡೆಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ಡಿಸೆಂಬರ್ ನಲ್ಲಿ 109 ಹಾಗೂ ಮಾರ್ಚ್ ನಲ್ಲಿ98 ಮಂದಿ ಕೈದಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದುಸ ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎಸ್. ಮೆಘರಿಕ್ ತಿಳಿಸಿದ್ದಾರೆ.
ಕಾರಾಗೃಹ ವ್ಯವಸ್ಥೆಯ ಸುಧಾರಣೆಗಾಗಿ ಸರಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಕೈದಿಗಳ ಕೌಶಲಾಭಿವೃದ್ಧಿಗಾಗಿ 2.5 ಕೋಟಿ ರೂ. ಮೀಸಲಿಡಲಾಗಿದೆ. ಕಾರಾಗೃಹಗಳಲ್ಲಿ 1,171 ವಾರ್ಡನ್ ಮತ್ತು 32 ಜೈಲರ್‌ಗಳನ್ನು ನೇಮಿಸಲಾಗಿದೆ. ಕೈದಿಗಳಿಗೆ ಮನರಂಜನೆ ದೊರೆಯುವಂತೆ ಮಾಡಲು 700 ಟಿ.ವಿ.ಗಳ ಖರೀದಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕಾರಾಗೃಹ ಇಲಾಖೆಯ ಪೊಲೀಸ್ ಉಪ ಮಹಾ ನಿರೀಕ್ಷಕ ಎಚ್.ಎಸ್.ರೇವಣ್ಣ ವಿವರಿಸಿದರು.
ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಕಾರಾಗೃಹ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎನ್.ಎಸ್ ಮೇಘರಿಕ್ ಹಾಜರಿದ್ದರು.