ರಾಜ್ಯ

ರಾಜ್ಯದ 86 ತಾಲೂಕುಗಳು ಬರಪೀಡಿತ: ಆರ್.ವಿ ದೇಶಪಾಂಡೆ

Shilpa D
ಬೆಂಗಳೂರು: ರಾಜ್ಯದ 23 ಜಿಲ್ಲೆಗಳ 86 ತಾಲೂಕುಗಳಲ್ಲಿ ಮಳೆ ತೀವ್ರ ಕೊರತೆ ಕಂಡುಬಂದಿದ್ದು, ಕೇಂದ್ರದ ಬರ ಕೈಪಿಡಿ ಮಾನದಂಡದ ಪ್ರಕಾರ 86 ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಕಂದಾಯ ಸಚಿವ ಆರ್ .ವಿ ದೇಶಪಾಂಡೆ ಹೇಳಿದ್ದಾರೆ.
ಮಂಗಳವಾರ ಸಂಪುಟ ಉಪ ಸಮಿತಿ ಸಭೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ರಾಜ್ಯದ ಬರ ಪರಿಸ್ಥಿತಿ ಕುರಿತು ಅವಲೋಕನ ನಡೆಸಲು ಮತ್ತು ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ನಮ್ಮ ಸಮಿತಿ ಚರ್ಚೆ ನಡೆಸಿತು. 176 ತಾಲೂಕುಗಳ ಆಧಾರದಲ್ಲೇ ಗುರುತಿಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಆಧಾರದಲ್ಲೇ 86 ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಳೆ ಅಭಾವದಿಂದ ಎಂಟು ಕೋಟಿ ರು. ಬೆಳೆ ನಷ್ಟವಾಗಿದ್ದು, ಬರಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಕಾರ್ಯಪಡೆಯೊಂದನ್ನು ರಚಿಸಿ ಪ್ರತಿ ತಾಲೂಕಿಗೆ 50 ಲಕ್ಷ ರು.ನಂತೆ 43 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಜೊತೆಗೆ ಈ ತಾಲೂಕುಗಳಲ್ಲಿ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಲು ಪಶುಸಂಗೋಪನೆ ಇಲಾಖೆಗೆ 15 ಕೋಟಿ ರು. ಬಿಡುಗಡೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಹೊಸದಾಗಿ 50 ತಾಲೂಕುಗಳನ್ನು ರಚನೆ ಮಾಡಲಾಗಿದ್ದರೂ ಹಳೆಯ ತಾಲೂಕುಗಳ ಆಧಾರದ ಮೇಲೆ ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ 23 ಜಿಲ್ಲೆಗಳ 86 ತಾಲೂಕುಗಳು ಸೇರಿವೆ ಎಂದು ತಿಳಿಸಿದರು.
ಕೊಡಗು ಮಳೆ ಅವಘಡದಲ್ಲಿ ಜೀವ ಕಳೆದುಕೊಂಡ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪರಿಹಾರ ನಿಧಿಯಿಂದ ನೆರವು ನೀಡಲು ನಿರ್ಧರಿಸಿದ್ದೇವೆ, ಮೊದಲು ಕೇಂದ್ರತಂಡ ಬಂದು ಪ್ರವಾಹ ಪೀಡಿತ ಕೊಡಗಿಗೆ ಭೇಟಿ ನೀಡಲಿ ಎಂದು ಹೇಳಿದ್ದಾರೆ.
SCROLL FOR NEXT