ಹೆಚ್ಚುತ್ತಿರುವ ಹಿಂದೂ ರಾಷ್ಟ್ರೀಯತೆ ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ: ಅಮೆರಿಕ ವರದಿ
ವಾಷಿಂಗ್ ಟನ್: ಭಾರತದಲ್ಲಿ ಹಿಂದೂ ರಾಷ್ಟ್ರೀಯತೆ ಎಂಬುದು ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗುತ್ತಿದ್ದು, ಭಾರತದ ಜಾತ್ಯಾತೀತ ಸ್ವರೂಪವನ್ನು ನಾಶ ಮಾಡುತ್ತಿದೆ ಎಂದು ಅಮೆರಿಕದ ಕಾಂಗ್ರೆಸ್ ವರದಿಯೊಂದು ಹೇಳಿದೆ.
ಸಾಮಾಜಿಕ ಜಾಲತಾಣಗಳು ಬಹುಸಂಖ್ಯಾರು ನಡೆಸುತ್ತಿರುವ ಹಿಂಸಾಚಾರಕ್ಕೆ ಪೂರಕವಾಗಿದೆ ಎಂದು ಅಮೆರಿಕ ಕಾಂಗ್ರೆಸ್ ವರದಿ ಇದೇ ವೇಳೆ ಎಚ್ಚರಿಕೆ ನೀಡಿದೆ. ಕಾಂಗ್ರೆಷನಲ್ ರಿಸರ್ಚ್ ಸರ್ವಿಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಧಾರ್ಮಿಕತೆಯಿಂದ ಉತ್ತೇಜನಗೊಂಡ ಹಿಂಸಾಚಾರ, ಸರ್ಕಾರದ ಮತಾಂತರ ನಿಷೇಧ ಕಾಯ್ದೆ, ಗೋ ರಕ್ಷಣೆ ಹೆಸರಿನಲ್ಲಿ ಸರ್ಕಾರೇತರ ಸಂಸ್ಥೆಗಳು ನಡೆಸುತ್ತಿರುವ ಹಿಂಸಾಚಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದೌರ್ಜನ್ಯಗಳು ಭಾರತದ ಜಾತ್ಯಾತೀತತೆಯ ಸ್ವರೂಪಕ್ಕೆ ಧಕ್ಕೆ ಉಂಟುಮಾಡುತ್ತಿವೆ ಎಂದು ಅಮೆರಿಕ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಸಿಆರ್ ಎಸ್ ಅಮೆರಿಕದ ಕಾಂಗ್ರೆಸ್ ನ ಅಧಿಕೃತ ವರದಿ ಅಥವಾ, ಅಲ್ಲಿನ ಸಂಸದರ ಅಭಿಪ್ರಾಯವನ್ನೂ ಬಿಂಬಿಸುವುದಿಲ್ಲ. ತಜ್ಞರ ಅಭಿಪ್ರಾಯ ಪಡೆದು ಸಂಸದರಿಗೆ ನಿರ್ದಿಷ್ಟ ವಿಚಾರಗಳಲ್ಲಿ ತೀರ್ಮಾನ ಕೈಗೊಳ್ಳುವುದಕ್ಕೆ ಸಹಕಾರಿಯಾಗಲೆಂದು ಈ ವರದಿಗಳನ್ನು ಸಿದ್ಧಪಡಿಸಲಾಗಿರುತ್ತದೆ. ಭಾರತ ಕುರಿತ ಈ ವರದಿ ಭಾರತ: ಧಾರ್ಮಿಕ ಸ್ವಾತಂತ್ರ್ಯ ವಿಷಯಗಳು (India: Religious Freedom issues) ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ.