ಬೆಂಗಳೂರು: ತಂದೆ-ತಾಯಿ ನಿಶ್ಚಯ ಮಾಡಿದ್ದ ಯುವತಿಯನ್ನು ಮದುವೆಯಾಗಲು ತನ್ನ ಪ್ರೇಯಸಿಯನ್ನೇ ಭೀಕರವಾಗಿ ಹತ್ಯೆ ಮಾಡಿ ಆಕೆಯ ಮಕ್ಕಳು ಉಪವಾಸದಿಂದಿರುವಂತೆ ಮಾಡಿದ್ದ ಆರೋಪಿಯನ್ನು ಬೆಂಗಳೂರಿನ ಕೆಆರ್ ಪುರಂನಲ್ಲಿ ಬಂಧಿಸಲಾಗಿದೆ.
ಬಂಗಾರಪೇಟೆಯ ಕಾಮಸಮುದ್ರ ಮೂಲದ ಗೋವಿಂದ (24 ವರ್ಷ) ಎಂಬಾತನನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದು, ಕೆ.ಆರ್. ಪುರದ ಮಂಜುನಾಥ ಲೇಔಟ್ನ ಲಕ್ಷ್ಮೀ (30 ವರ್ಷ) ಎಂಬಾಕೆ ಯನ್ನು ಸೆಪ್ಟೆಂಬರ್ 10ರಂದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನಿನ್ನೆ ಆರೋಪಿಯನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವೈಟ್ಫೀಲ್ಡ್ ಉಪವಿಭಾಗ ಡಿಸಿಪಿ ಅಬ್ದುಲ್ ಅಹಾದ್ ಅವರು, ಕೆಲ ವರ್ಷಗಳ ಹಿಂದೆ ಪ್ರಸ್ತುತ ಹತ್ಯೆಗೀಡಾಗಿರುವ ಲಕ್ಷ್ಮೀ ತಮ್ಮ ಪತಿಯಿಂದ ದೂರವಾಗಿ ಕೂಲಿ ಕೆಲಸ ಮಾಡಿಕೊಂಡು ಇಬ್ಬರು ಗಂಡು ಮಕ್ಕಳ ಜತೆ ಕೈಗೊಂಡನಹಳ್ಳಿಯಲ್ಲಿ ನೆಲೆಸಿದ್ದರು. ಈ ನಡುವೆ ಬೇಕರಿಯ ಕೆಲಸಗಾರ ಗೋವಿಂದನ ಪರಿಚಯವಾಗಿ ಸಲುಗೆ ಬೆಳೆದಿತ್ತು. ಲೇಔಟ್ನಲ್ಲಿ ಬಾಡಿಗೆಮನೆ ಮಾಡಿದ್ದ ಗೋವಿಂದ, ಲಕ್ಷ್ಮೀ ಮತ್ತು ಆಕೆಯ ಮಕ್ಕಳನ್ನು ಕರೆತಂದು ಇಟ್ಟುಕೊಂಡಿದ್ದ. ಮನೆಯ ಜವಾಬ್ದಾರಿಯನ್ನು ಲಕ್ಷ್ಮೀಗೇ ವಹಿಸಿದ್ದ. ಆದರೆ, ಆಕೆಗೆ ಹಣದ ನೆರವು ನೀಡುತ್ತಿರಲಿಲ್ಲ.
ಈ ನಡುವೆ ಗೋವಿಂದನ ತಂದೆ-ತಾಯಿ ಆತನಿಗೆ ವಧು ನೋಡಿ ಮದುವೆ ನಿಶ್ಚಯ ಮಾಡಿದ್ದರು. ಗೋವಿಂದ ಈ ವಿಚಾರವನ್ನು ಲಕ್ಷ್ಮೀ ಬಳಿ ಪ್ರಸ್ತಾಪ ಮಾಡಿದ್ದ. ಆಕೆ 'ನಾನು ಇರಬೇಕಾದರೆ ಮತ್ತೊಂದು ಮದುವೆ ಯಾಕೆ' ಎಂದು ಪ್ರಶ್ನಿಸಿದ್ದಳು. ಮದುವೆಗೆ ಅಡ್ಡಿಪಡಿಸುತ್ತಾಳೆ ಎಂದು ಆಕೆಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಮನೆಗೆ ಬೀಗ ಹಾಕಿ ಕೀ ಎಸೆದಿದ್ದ. ಆಕೆಯ ಮಕ್ಕಳಿಗೆ 'ನಿಮ್ಮ ತಾಯಿ ಊರಿಗೆ ಹೋಗಿದ್ದಾಳೆ' ಎಂದು ಹೇಳಿ ಅವರನ್ನು ರಸ್ತೆಯಲ್ಲೇ ಬಿಟ್ಟು, ತಾನು ಮಾತ್ರ ತನ್ನ ಹುಟ್ಟೂರಾದ ಬಂಗಾರಪೇಟೆಯ ಕಾಮಸಮುದ್ರಕ್ಕೆ ಹೋಗಿ ತಲೆಮರೆಸಿಕೊಂಡಿದ್ದ. ಸೆ.14ರಂದು ಗಣೇಶ ಮೂರ್ತಿ ಕೂರಿಸಲು ಸ್ಥಳೀಯರು ಶಾಮಿಯಾನದ ಹಗ್ಗವನ್ನು ಕಿಟಕಿ ಕಂಬಿಗೆ ಕಟ್ಟಲು ಹೋದಾಗ ಮನೆಯಿಂದ ದುರ್ವಾಸನೆ ಬಂದಿದೆ. ಅನುಮಾನ ಬಂದು ಕಟ್ಟಡ ಮಾಲೀಕ ನಾರಾಯಣ ಎಂಬುವರಿಗೆ ವಿಷಯ ತಿಳಿಸಿದ್ದು, ಆತ ಬಂದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೀದಿಯಲ್ಲೇ 2 ದಿನ ಹಸಿವಿನಿಂದ ಮಲಗಿದ್ದ ಮಕ್ಕಳು
ತಾಯಿ ಊರಿಗೆ ಹೋಗಿರುವುದಾಗಿ ನಂಬಿದ್ದ ಪುಟ್ಟ ಮಕ್ಕಳು 2 ದಿನ ಬೀದಿಯಲ್ಲೇ ಕಾಲ ಕಳೆದಿದ್ದರು. ಅಕ್ಕಪಕ್ಕದ ಮನೆಯವರು ಮಾನವೀಯತೆ ದೃಷ್ಟಿಯಿಂದ ಮಕ್ಕಳಿಗೆ ಆಹಾರ ನೀಡುತ್ತಿದ್ದರು. ರಾತ್ರಿ ವೇಳೆ ಮಕ್ಕಳು ಬೀದಿಯಲ್ಲೇ ಮಲಗಿ ಕಾಲ ಕಳೆಯುತ್ತಿದ್ದವು. ಇದೀಗ ತಂದೆ-ತಾಯಿ ಇಬ್ಬರೂ ಇಲ್ಲದೆ ಆ ಮಕ್ಕಳು ಅನಾಥವಾಗಿವೆ. ಇನ್ನು ಪ್ರೇಯಸಿ ಲಕ್ಷ್ಮೀಯನ್ನು ಹತ್ಯೆ ಮಾಡಿದ ಗೋವಿಂದ ಕಾಮಸಮುದ್ರಕ್ಕೆ ತೆರಳಿ ಏನೂ ಅರಿಯದಂತೆ ಇದ್ದ. ತಾನು ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ತನ್ನ ಸ್ನೇಹಿತ ನಾನು ಇಲ್ಲದಾಗ ಮಹಿಳೆಯನ್ನು ಕರೆತಂದು ಹತ್ಯೆ ಮಾಡಿದ್ದಾನೆ. ಅದಕ್ಕಾಗಿ ಸ್ವಲ್ಪ ದಿನ ಬಿಟ್ಟು ಹೋಗುವುದಾಗಿ ಪರಿಚಯಸ್ಥರ ಬಳಿ ಗೋವಿಂದ ಹೇಳಿಕೊಂಡಿದ್ದ. ಆರೋಪಿಯನ್ನು ಬಂಧಿಸಿ ಘಟನಾ ಸ್ಥಳಕ್ಕೆ ಕರೆತಂದಾಗಲೂ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಆತನ ವರ್ತನೆ ಮೇಲೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ಘಟನೆಯನ್ನು ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics