ಬೆಂಗಳೂರು: ಔಷಧಗಳ ಮಾರಾಟಕ್ಕೆ ಇ-ಫಾರ್ಮಸಿ ವ್ಯವಸ್ಥೆ ವಿರೋಧಿಸಿ ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ (ಎಐಒಸಿಡಿ) ಕರೆ ನೀಡಿರುವ ಬಂದ್‌ಗೆ ಸರ್ಕಾರಿ ಔಷಧಿ ಅಂಗಡಿಗಳು ಬೆಂಬಲ ನೀಡುವಂತಿಲ್ಲ ಎಂದು ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಔಷಧಿ ಅಂಗಡಿಗಳು ಯಾವುದೇ ಕಾರಣಕ್ಕೂ ಬಂದ್ ಮಾಡುವಂತಿಲ್ಲ ಎಂದಿರುವ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರಿಗೆ ಸೇವೆ ನೀಡದ ಸರ್ಕಾರಿ ಔಷಧಿ ಅಂಗಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.
ಔಷಧ ಮಳಿಗೆಗಳ ಮಾಲೀಕರು ಬಂದ್ ಗೆ ಕರೆ ನೀಡಿದ ಬೆನ್ನಲ್ಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಅಗತ್ಯ ಜೀವರಕ್ಷಕ ಔಷಧಗಳನ್ನು ದಾಸ್ತಾನು ಮಾಡಿಕೊಳ್ಳುವಂತೆ ರಾಜ್ಯದ ಆಸ್ಪತ್ರೆಗಳಿಗೆ ಸೂಚಿಸಿದ್ದಾರೆ. ಜಿಲ್ಲಾ, ತಾಲೂಕು, ಸಾರ್ವಜನಿಕ, ಸಮುದಾಯ ಕೇಂದ್ರ ಹಾಗೂ ಪ್ರಾಥಮಿಕ ಕೇಂದ್ರದಲ್ಲಿ ಜೀವರಕ್ಷಕ ಔಷಧ ಸಿಗಲಿದೆ.