ರಾಜ್ಯ

ಗೌರಿ ಹತ್ಯೆ ಪ್ರಕರಣ: ಎಸ್ಐಟಿ ಅಧಿಕಾರಿಗಳು ಬಲವಂತದಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ- ವಾಗ್ಮೋರೆ ಆರೋಪ

Manjula VN
ಬೆಂಗಳೂರು: ಎಸ್ಐಟಿ ಅಧಿಕಾರಿಗಳು ನಮ್ಮನ್ನು ಬೆದರಿಸಿ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆಂದು ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಶನಿವಾರ ಆರೋಪಿಸಿದ್ದಾನೆ. 
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಇಂದಿಗೆ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾ ಠಾಣೆ ಪೊಲೀಸರು ಆರೋಪಿಗಳನ್ನು ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆ ತಂದಿದ್ದರು. ಈ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ಆರೋಪಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 
ಗೌರಿ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ನಮ್ಮನ್ನು ಗುರಿ ಮಾಡುತ್ತಿದ್ದಾರೆ. ನಾವು ಯಾವ ತಪ್ಪನ್ನೂ ಮಾಡಿಲ್ಲ. ಅಧಿಕಾರಿಗಳು ನಮ್ಮಿಂದ ಬಲವಂತವಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಒಬ್ಬ ಅಧಿಕಾರಿ ಹೊಡೆದು ಬೆದರಿಸಿದರೆ, ಮತ್ತೊಬ್ಬರು ತಪ್ಪು ಒಪ್ಪಿಕೊಂಡರೆ ಹಣ ನೀಡುವುದಾಗಿ ಆಮಿಷವೊಡ್ಡುತ್ತಿದ್ದಾರೆ. ಇನ್ನೂ ಕೆಲ ಅಧಿಕಾರಿಗಳು ಹೊಡೆಯುತ್ತಾರೆಂದು ಆರೋಪಿಸಿದ್ದಾರೆ. 
ಇದಲ್ಲದೆ ಅಣ್ಣ-ತಮ್ಮಂದಿರು ಇಬ್ಬರನ್ನೂ ಕೇಸ್ ನಲ್ಲಿ ಫಿಟ್ ಮಾಡುತ್ತೇವೆಂದು ಹೇಳಿ ಬಲವಂತವಾಗಿ ವಿಡಿಯೋ ಪಡೆದುಕೊಂಡು ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆಂದು ಹೇಳಿಕೊಂಡಿದ್ದಾನೆ. 
ಪ್ರಕರಣ ಸಂಬಂಧ ಎಸ್ಐಟಿ ಆಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು. ಆರೋಪಿಗಳನ್ನು ಮತ್ತೆ ಅಕ್ಟೋಬರ್ 12ರವರೆಗೂ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ. 
SCROLL FOR NEXT