ರಾಜ್ಯ

ಕತ್ತೆಗಳ ಪಾದಪೂಜೆ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವಾಟಾಳ್ ನಾಗರಾಜ್!

Raghavendra Adiga
ಬೆಂಗಳೂರು: ಕನ್ನಡ ಪರ ಹೋರಾಟಗಾರ, ಕನ್ನಡ ಚಳವಳಿ ವಾಟಾಳ್ ಪಕ್ಷ ನಾಯಕರಾದ ವಾಟಾಳ್ ನಾಗರಾಜ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಆದರೆ ತಾವು ಎಲ್ಲರಿಗಿಂತ ವಿಭಿನ್ನ ಎನ್ನುವುದನ್ನು ಪದೇ ಪದೇ ಸಾಬೀತು ಪಡಿಸುವ ವಾಟಾಳ್ ತಮ್ಮ ಜನ್ಮದಿನವನ್ನು ಸಹ ವಿಭಿನ್ನ ಶೈಲಿಯಲ್ಲಿ ಆಚರಿಸಿಕೊಂಡಿದ್ದಾರೆ. ಕತ್ತೆಗಳಿಗೆ ಪಾದಪೂಜೆ ನೆರವೇರಿಸುವ ಮೂಲಕ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ಬೆಂಗಳೂರು ಪುರಭವನದ ಎದುರು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾ.ರಾ.ಗೋವಿಂದು, ಕನ್ನಡ ಪರ ಹೋರಾಟಗಾರರು ಹಾಗೂ ಮಗಳು ಅನುಪಮ ವಾಟಾಳ್ ಜತೆಯಾಗಿ ಬಾಗವಹಿಸಿದ್ದ ವಾಟಾಳ್ ನಾಗರಾಜ್ ಹುಟ್ಟು ಹಬ್ಬಕ್ಕೆ  ವೀರಗಾಸೆ, ಡೊಳ್ಳು ಕುಣಿತ, ಸೇರಿ ಅನೇಕ ಜನಪದ ಕಲಾತಂಡಗಳ ಪ್ರದರ್ಶನ ಸಹ ಏರ್ಪಾಡಾಗಿತ್ತು.
ವಿಶೇಷವೆಂದರೆ 1962ರಲ್ಲಿ ಕನ್ನಡ ಚಳವಳಿಯಲ್ಲಿ ಭಾಗವಹಿಸಿದ್ದ ವಾಟಾಳ್ ಅವರನ್ನು ಪೋಲೀಸರು ಬೂಟುಗಾಲಿನಿಂದ ಒದ್ದಿದ್ದರು. ಪೋಲೀಸರ ಬೂಟಿನ ಒದೆ ತಿಂದ ಅದೇ ದಿನವನ್ನು ಕಳೆದ ಐದು ದಶಕಗಳಿಂದ ವಾಟಾಳ್ ನಾಗರಾಜ್ ತಮ್ಮ ಜನ್ಮ ದಿನ ಎಂದು ಆಚರಿಸಿಕೊಂಡು ಬರುತ್ತಿದ್ದಾರೆ.
ಇಂದೂ ಕೂಡ ಅದೇ ಘಟನೆ ನೆನಪಿಸಿಕೊಂಡ ವಾಟಾಳ್ "ಪೋಲೀಆರು ಬೂಟುಗಾಲಿನಿಂದ ಒದ್ದ ದಿನವನ್ನು ನಾನು ನನ್ನ ಹುಟ್ಟುಹಬ್ಬವಾಗಿ ಆಚರಿಸಿಕೊಳ್ಳುತ್ತೇನೆ.ಇದು ನನ್ನ ಸಂತೋಷದ ದಿನ. ಕನ್ನಡವೇ ನನ್ನ ಉಸಿರು. ಕನ್ನಡ ಪರ ಹೋರಾಟದಲ್ಲೇ ನನಗೆ ಖುಷಿ ಇದೆ" ಎಂದಿದ್ದಾರೆ.
"ರಾಮಚಂದ್ರೇಗೌಡರನ್ನು ಮತ್ತೆ ವಿಧಾನ ಸಭೆಗೆ ಕಳಿಸಬೇಕಿದೆ. ರಿಯಲ್ ಎಸ್ಟೇಟ್ ಮಾಲೀಕರನ್ನು ವಿಧಾನ ಸೌಧದಿಂದ ದೂರವಿಡಿಕನ್ನಡ ಹೋರಾಟಗಾರರು ವಿಧಾನ ಸೌಧಕ್ಕೆ ತೆರಳುವಂತಾಗಬೇಕು. ಎಲ್ಲಾ ಪಕ್ಷಗಳು ಕನ್ನಡ ಚಳವಳಿ ನಾಯಕರಿಗೆ ಆದ್ಯತೆ ನೀಡಬೇಕು" ಎಂದು ವಾಟಾಳ್ ಕರೆ ನಿಡಿದ್ದಾರೆ.
ಪರಿಷತ್ ನಾಮ ನಿರ್ದೇಶನದ ವೇಳೆ ಸಿನಿಮಾ, ಸಾಹಿತ್ಯ ವಲಯ ಸೇರಿ ಅನೇಕ ವಲಯದ ವ್ಯಕ್ತಿಗಳ ಹೆಸರು ಸೂಚಿತವಾಗುತ್ತದೆ. ಆದರೆ ಕನ್ನಡ ಚಳವಳಿಗಾರರನ್ನು ಕೈಬಿಟ್ಟಿದ್ದೀರಿ ಎಂದು ಅವರು ಆರೋಪಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಹೋರಾಟಗಾರರಾದ ಟಿಪಿ ಪ್ರಸನ್ನ ಕುಮಾರ್, ಕನ್ನಡ ಸೇನೆಯ ಕೆ.ಆರ್. ಕುಮಾರ್, ಶಿವರಾಮೇಗೌಡ ಸೇರಿ ಅನೇಕರು ಭಾಗವಹಿಸಿದ್ದರು.
SCROLL FOR NEXT