:ಹಾಸನ ಬಾಳೆಹಣ್ಣಿನ ಗೊನೆಗಳನ್ನು ತರಲೆಂದು ನೆಲಮಾಳಿಗೆಗೆ ಇಳಿದಿದ್ದ ಇಬ್ಬರು ಅಲ್ಲಿನ ವಿಷ ಮಿಶ್ರಿತ ಗಾಳಿ ಸೇವನೆಯಿಂದ ಮೃತರಾಗಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಹಾಸನ ತಾಲ್ಲೂಕು ಹಂಚಿಹಳ್ಳಿಎಂಬಲ್ಲಿ ಭಾನುವಾರ ಸಂಜೆ ನೆಲದಿಂದ 10 ಅಡಿ ಆಳದಲ್ಲಿದ್ದ ನೆಲಮಾಳಿಗೆಯಲ್ಲಿ ಇಡಲಾಗಿದ್ದ ಬಾಳೆಗೊನೆ ತರಲು ಹೋಗಿದ್ದ ವೆಂಕಟೇಶ್ (45) ಮತ್ತು ಮಂಜೇಗೌಡ (51) ಎಂಬುವವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಸವೇಗೌಡ ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಂಡಿಕಾಂಬ ದೇವಾಲಯದ ವಾರ್ಷಿಕ ಉತ್ಸವದ ಆಚರಣೆಗಾಗಿ ಬಾಳೆಹಣ್ಣುಗಳನ್ನು ತರಲು ಮೂವರೂ ನೆಲಮಾಳಿಗೆಯಲ್ಲಿದ್ದ ಕೋಣೆಗೆ ಹೋಗಿದ್ದಾರೆ. ವಾರಗಳ ಹಿಂದೆ ಇಲ್ಲಿ ಬಾಳೆಕಾಯಿಗಳನ್ನಿಟ್ಟಿದ್ದು ಅವು ಹಣ್ಣಾಗುವುದಕ್ಕಾಗಿ ರಾಸಾಯನಿಕಗಳನ್ನು ಸಿಂಪಡಿಸಲಾಗಿತ್ತು. ಈ ವೇಳೆ ಕೋಣೆ ಪ್ರವೇಶಿಸಿದ್ದ ವೆಂಕಟೇಶ್ ಮತ್ತು ಮಂಜೇಗೌಡ ರಾಸಾಯನಿಕಯುಕ್ತ ವಿಷಗಾಳಿಯ ಸೇವನೆ ಮಾಡಿದ ಕೆಲಕ್ಷಣದಲ್ಲಿಯೇ ಮೃತಪಟ್ಟರು ಎಂದು ವರದಿಗಳು ಹೇಳಿದೆ.