ರಾಜ್ಯ

ಬೆಂಗಳೂರಿನ ಇವರಿಗೆ 9 ಲಕ್ಕಿ ನಂಬರ್: ಕೊಲಂಬೊ ಸ್ಫೋಟದಿಂದ ಬಚಾವಾಗಿ ಬಂದ 9 ಮಂದಿ!

Sumana Upadhyaya
ಬೆಂಗಳೂರು: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಬೆಂಗಳೂರಿನ ಜಯನಗರದ 9 ಮಂದಿ ಅಪಾಯದಿಂದ ಪಾರಾಗಿ ಸುರಕ್ಷಿತವಾಗಿ ಮರಳಿದ್ದಾರೆ.
ಕೊಲಂಬಿಯಾ ಏಷಿಯಾ ಆಸ್ಪತ್ರೆಯ ನರತಜ್ಞ ಡಾ ರಘುರಾಮ್ ಜಿ, ಶ್ರೀನಿವಾಸನ್ ಮತ್ತು ಇತರರು ಶ್ರೀಲಂಕಾಕ್ಕೆ ಪ್ರವಾಸ ಹೋಗಿದ್ದರು. ಕೊಲಂಬೊದಲ್ಲಿ ಮೊನ್ನೆ ಉಂಟಾದ ಬಾಂಬ್ ಸ್ಫೋಟ ಸ್ಥಳ ಸೇರಿದಂತೆ ಹಲವು ಸ್ಥಳಗಳಿಗೆ ಭೇಟಿ ಕೊಟ್ಟಿದ್ದರು. ಸ್ಫೋಟವಾಗುವುದಕ್ಕೆ ಕೆಲವೇ ಗಂಟೆ ಮೊದಲು ಅಲ್ಲಿಂದ ಹೊರಟಿದ್ದರು. ಇವರ ತಂಡ ನಿನ್ನೆ ಬೆಂಗಳೂರಿಗೆ ವಾಪಸ್ಸಾಯಿತು.
ಅಲ್ಲಿನ ಘಟನೆಯನ್ನು ವಿವರಿಸಿದ ಡಾ ರಘುರಾಮ್, ಬಾಂಬ್ ಸ್ಫೋಟವಾದಾಗ ನಾವು ಗಲ್ಲೆಯಲ್ಲಿದ್ದೆವು. ಗಲ್ಲೆ ಇರುವುದು ಸ್ಫೋಟವಾದ ಸ್ಥಳದಿಂದ 120 ಕಿಲೋ ಮೀಟರ್ ದೂರದಲ್ಲಿ. ನಮ್ಮ ಚಾಲಕ ಹೇಳುವವರೆಗೆ ನಮಗೆ ಸ್ಫೋಟವಾಗಿದ್ದು ಗೊತ್ತಿಲ್ಲ, ನಾವು ಸುರಕ್ಷಿತವಾಗಿ ಮರಳಿದ್ದೇವೆ ಎಂದು ಹೇಳಿದರು.
ಭಾನುವಾರ ಸ್ಫೋಟವುಂಟಾಗಿದ್ದು ನಾವು ಅಲ್ಲಿಗೆ ಶನಿವಾರವಷ್ಟೆ ಹೋಗಿದ್ದೆವು. ನಾವು ಬೆಂಗಳೂರಿಗೆ ಭಾನುವಾರ ವಾಪಸ್ಸಾಗಬೇಕಾಗಿತ್ತು. ಆದರೆ ಕರ್ಫ್ಯೂನಿಂದಾಗಿ ವಿಮಾನ ನಿಲ್ದಾಣಕ್ಕೆ 6 ಗಂಟೆ ತಡವಾಗಿ ತಲುಪಿದೆವು ಎಂದರು.
ಸ್ಫೋಟವಾದ ನಂತರ ಭದ್ರತೆ ತೀವ್ರವಾಗಿದ್ದು, ವಿಮಾನ ನಿಲ್ದಾಣದಲ್ಲಿ ತಪಾಸಣೆ ಮುಗಿಯಲು 2 ಗಂಟೆ ಹಿಡಿಯಿತು. ಸ್ಫೋಟದ ನಂತರ ತೆಗೆದುಕೊಂಡ ಭದ್ರತೆ ಕ್ರಮಗಳು ಬಿಗಿಯಾಗಿದ್ದವು. ಕರ್ಫ್ಯೂ ಹೇರಿದ್ದರಿಂದ ಊಟ, ತಿಂಡಿ ಹಾಗೂ ಕೆಲವು ಮೂಲ ಸಾಮಗ್ರಿಗಳಿಗೆ ತೊಂದರೆಯಾಯಿತು ಎಂದರು.
SCROLL FOR NEXT