ಬೆಂಗಳೂರು: ಕಳೆದ 13 ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸ್ವರ್ಣ ರಥ ನಿರ್ಮಾಣ ವಿಚಾರವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮರುಜೀವ ನೀಡಲು ಮುಂದಾಗುತ್ತಿದ್ದಂತೆಯೇ ಎದ್ದಿದ್ದ ಹಲವು ಊಹಾಪೋಹಗಳಿಗೆ ಅವರೇ ಖುದ್ದು ಸ್ಪಷ್ಟನೆ ನೀಡಿದ್ದಾರೆ.
2005 ಮತ್ತು 2006 ರಲ್ಲಿಯೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ನಿರ್ಮಾಣಕ್ಕೆ ಅಂದಿನ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಕ್ಷೇತ್ರದ ಭಕ್ತರು ತಮ್ಮ ಭೇಟಿಯಾಗಿ ಹಿಂದಿನ ರಥ ನಿರ್ಮಾಣ ಯೋಜನೆಯನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದು, ರಥ ನಿರ್ಮಾಣಕ್ಕೆ ಅಗತ್ಯವಾದ ಚಿನ್ನ ಮತ್ತು ನಿರ್ಮಾಣ ವೆಚ್ಚಗಳ ಅಂದಾಜು ಪರಿಷ್ಕರಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾವನೆಯನ್ನು ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲೊಂದು. ಅಷ್ಟೇ ಅಲ್ಲದೇ ಮುಜರಾಯಿ ಇಲಾಖೆಗೆ ದೇವಸ್ಥಾನದಿಂದ ಸಾಕಷ್ಟು ಆದಾಯ ಹರಿದುಬರುತ್ತಿದೆ. 13 ವರ್ಷಗಳ ಹಿಂದೆ 2005ರಲ್ಲಿ ಕುಮಾರಸ್ವಾಮಿ ದೇವಸ್ಥಾನಕ್ಕೆ ರಥ ನಿರ್ಮಾಣ ಮಾಡಿಕೊಡುವ ಬಗ್ಗೆ ಹರಕೆ ಮಾಡಿಕೊಂಡಿದ್ದು, 2006 ರಲ್ಲಿ ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಂತಹ ಸಂದರ್ಭದಲ್ಲಿ ಚಿನ್ನದ ರಥ ನಿರ್ಮಿಸಲು ಆದೇಶಿಸಿದ್ದರು. ಬಳಿಕ ಅದು ಸಾಕಾರಗೊಂಡಿರಲಿಲ್ಲ.
ಕೆಲ ದಿನಗಳ ಹಿಂದೆ ರಾಜಕಾರಣಿಗಳ ಜ್ಯೋತಿಷಿ ಎಂದೇ ಖ್ಯಾತರಾಗಿರುವ ದ್ವಾರಕನಾಥ್ ಅವರು ಸರ್ಕಾರ ಸುಭದ್ರವಾಗಿ ನಡೆಯಲು ಹಾಗೂ ಪುತ್ರ ನಿಖಿಲ್ ಗೆಲುವಿಗೆ ಹಳೆಯ ಹರಕೆಯನ್ನು ತೀರಿಸಬೇಕು. ಕುಕ್ಕೆ ದೇವಸ್ಥಾನಕ್ಕೆ ಚಿನ್ನದ ರಥವನ್ನು ನಿರ್ಮಿಸಿಕೊಡಬೇಕು ಎಂದು ಸಲಹೆ ನೀಡಿದ್ದರು ಎನ್ನಲಾಗಿತ್ತು.
ಕಳೆದ ಶನಿವಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದ ಕುಮಾರಸ್ವಾಮಿ ರಥ ನಿರ್ಮಾಣ ಸಂಬಂಧ ಸಮಾಲೋಚನೆ ನಡೆಸಿದ್ದರು. ಸ್ವರ್ಣ ರಥ ನಿರ್ಮಾಣಕ್ಕೆ 240 ಕೆ.ಜಿ.ಚಿನ್ನದ ಅಗತ್ಯತೆಯಿದ್ದು, ಇದಕ್ಕೆ ಸುಮಾರು 85 ಕೋಟಿ ರೂ. ವೆಚ್ಚವನ್ನು ಅಂದಾಜಿಸಲಾಗಿದೆ. ಕುಕ್ಕೆ ದೇವಳದಲ್ಲಿ 320 ಕೋಟಿ ರೂ. ಸ್ವಂತ ನಿಧಿ ಇದ್ದು, ನಿಧಿಯಲ್ಲಿನ ಸ್ವಲ್ಪ ಭಾಗವನ್ನು ರಥ ನಿರ್ಮಾಣಕ್ಕೆ ಬಳಸಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಈ ಸಂಬಂಧ ಮುಜರಾಯಿ ಇಲಾಖೆಯಿಂದ ಸಚಿವ ಸಂಪುಟಕ್ಕೆ ಅನುಮೋದನೆ ಕಳುಹಿಸಲು ಸೂಚಿಸಿದ್ದಾರೆ.
ಮೇ 6 ರಂದು ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯಿದ್ದು, ಸಭೆಯಲ್ಲಿ ರಥ ನಿರ್ಮಾಣದ ಪ್ರಸ್ತಾವನೆಗೆ ಅನುಮೋದನೆ ಸಿಗಲಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ನಡೆಯುತ್ತಿದ್ದಂತೆಯೇ ದಿಢೀರನೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂಗಾರದ ರಥ ನಿರ್ಮಾಣಕ್ಕೆ ಕುಮಾರಸ್ವಾಮಿ ವೇಗ ಕಲ್ಪಿಸಿರುವುದು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ 2005 ಮತ್ತು 2006 ರಲ್ಲಿಯೇ ರಥ ನಿರ್ಮಾಣ ಸಂಬಂಧ ಆದೇಶಿಸಲಾಗಿತ್ತು. ಇದು ಈಗಿನ ನಿರ್ಧಾರವಲ್ಲ. 2005 ರಲ್ಲಿಯೇ ರಾಜ್ಯ ಸರ್ಕಾರ 15 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದಕ್ಕಾಗಿ ದೇವಾಲಯದಲ್ಲಿ ಲಭ್ಯವಿರುವ ಚಿನ್ನ ಬಳಸಿಕೊಂಡು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಸರ್ಕಾರ ಅನುಮೋದನೆ ನೀಡಿತ್ತು. ಈ ಆದೇಶಗಳಲ್ಲಿ ರಥ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಸದೇ, ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂದಲೇ ರಥ ನಿರ್ಮಾಣ ವೆಚ್ಚ ಭರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos