ಮೊಟ್ಟೆ ಪ್ರಿಯರಿಗೆ ಗುಡ್‌ ನ್ಯೂಸ್‌; ಬೆಲೆಯಲ್ಲಿ ಭಾರೀ ಇಳಿಕೆ, ಗ್ರಾಹಕರು ಸಂತಸ

ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ತಿಳಿಸಿದೆ.
Egg Prices Touch 100 rupees Per Dozen
ಮೊಟ್ಟೆ ದರ ಏರಿಕೆ
Updated on

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಕೆಲವು ವಾರಗಳಿಂದ ಮೊಟ್ಟೆ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ರೂ. 7.06 ಇದ್ದು ಒಂದು ಮೊಟ್ಟೆಯ ಬೆಲೆ ಇದೀಗ ರೂ.4.60ಕ್ಕೆ ಇಳಿಕೆಯಾಗಿದ್ದು ಇದು ಗ್ರಾಹಕರಲ್ಲಿ ಸಂತಸ ಮೂಡಿಸಿದ್ದರೆ, ಕೋಳಿ ಸಾಕಾಣಿಕೆದಾರರಲ್ಲಿ ಆತಂಕ ಮೂಡಿಸಿದೆ.

ರಫ್ತು ವ್ಯತ್ಯಯ, ಹಬ್ಬದ ಕಾಲದ ಬೇಡಿಕೆ ಕುಸಿತ ಹಾಗೂ ಬೇಸಿಗೆ ಪರಿಣಾಮ ಮೊಟ್ಟೆ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಸುಮಾರು 15 ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮೊಟ್ಟೆ ದರದಲ್ಲಿ ದೊಡ್ಡ ಮಟ್ಟದ ಇಳಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (ಎನ್‌ಇಸಿಸಿ) ತಿಳಿಸಿದೆ.

ರಾಜ್ಯದವಲ್ಲಿ ಪ್ರತಿದಿನ ಸುಮಾರು 2.2 ಕೋಟಿ ಮೊಟ್ಟೆಗಳು ಉತ್ಪಾದನೆಯಾಗುತ್ತವೆ. ಈ ಮೊಟ್ಟೆಗಳ ಒಂದು ಭಾಗವನ್ನು ತಮಿಳುನಾಡಿನ ನಾಮಕ್ಕಲ್ ಕೇಂದ್ರಕ್ಕೆ ಕಳುಹಿಸಿ ಅಲ್ಲಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಸಾಮಾನ್ಯವಾಗಿ ನಾಮಕ್ಕಲ್ ನಿಂದ ದಿನಕ್ಕೆ ಸುಮಾರು 70 ಲಕ್ಷದಿಂದ 1 ಕೋಟಿ ಮೊಟ್ಟೆಗಳು ಗಲ್ಫ್ ದೇಶಗಳಿಗೆ ಸಾಗುತ್ತವೆ.

ಆದರೆ, ಯುದ್ಧ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ರಫ್ತು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆಗಳ ಸಂಗ್ರಹ ಹೆಚ್ಚಾಗಿದೆ ಎನ್ನಲಾಗಿದ್ದು, ಇದೂ ಕೂಡ ಬೆಲೆ ಕುಸಿತಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಹೊಸಪೇಟೆ ಮೊಟ್ಟೆ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನದಲ್ಲಿದ್ದು, ನಂತರದ ಸ್ಥಾನವನ್ನು ಮೈಸೂರು ಪಡೆದುಕೊಂಡಿದೆ.

Egg Prices Touch 100 rupees Per Dozen
ಮೊಟ್ಟೆ ಬೆಲೆ ಹೊಸ ದಾಖಲೆ: ಗ್ರಾಹಕರಿಗೆ ದರ ಏರಿಕೆ ಶಾಕ್; ಜನವರಿಯಲ್ಲಿ ಇಳಿಕೆ ಸಾಧ್ಯತೆ

ಬೆಲೆ ಕುಸಿತಕ್ಕೆ ಮತ್ತೊಂದು ಕಾರಣ ಹಬ್ಬದ ಸೀಸನ್. ರಂಜಾನ್ ಅವಧಿಯಲ್ಲಿ ಕೆಲ ಸಮುದಾಯಗಳಲ್ಲಿ ಮೊಟ್ಟೆ ಬಳಕೆ ಕಡಿಮೆಯಾಗುತ್ತದೆ. ಜೊತೆಗೆ ಈಸ್ಟರ್ ಕಾಲ ಮತ್ತು ಬೇಸಿಗೆ ಆರಂಭವಾಗಿರುವುದರಿಂದ ಸಹ ಸಾಮಾನ್ಯವಾಗಿ ಮೊಟ್ಟೆ ಬೇಡಿಕೆ ಇಳಿಕೆಯಾಗುತ್ತದೆ.

ಆದರೆ, ಬೆಲೆ ಇಳಿಕೆಯಾಗಿದ್ದರೂ ಮೊಟ್ಟೆ ಉತ್ಪಾದನೆ ಮತ್ರ ನಿಂತಿಲ್ಲ. ಪರಿಣಾಮವಾಗಿ ಹೆಚ್ಚುವರಿ ಮೊಟ್ಟೆಗಳನ್ನು ಶೀತಗೃಹಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಶೀತಗೃಹಗಳಲ್ಲಿ ಮೊಟ್ಟೆಗಳನ್ನು ಸುಮಾರು ಮೂರು ತಿಂಗಳುಗಳವರೆಗೆ ಸಂರಕ್ಷಿಸಬಹುದು.

ಕೆಲವು ಹೆಚ್ಚುವರಿ ಮೊಟ್ಟೆಗಳನ್ನು ಎಗ್ ಪೌಡರ್ ಆಗಿ ಪರಿವರ್ತಿಸಲಾಗುತ್ತಿದೆ. ಈ ಪೌಡರ್ ಅನ್ನು ತಾಜಾ ಮೊಟ್ಟೆಗಳು ಸುಲಭವಾಗಿ ಲಭ್ಯವಿಲ್ಲದ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಭಾರತದಲ್ಲಿ ನಾಮಕ್ಕಲ್, ಮುಂಬೈ ಹಾಗೂ ಕೋಲಾರ ಜಿಲ್ಲೆಯ ಮಾಲೂರು ಪ್ರದೇಶಗಳಲ್ಲಿ ಎಗ್ ಪೌಡರ್ ಘಟಕಗಳಿವೆ. ಮಾಲೂರಿನಲ್ಲಿ ಪ್ರತಿದಿನ ಸುಮಾರು 12 ಲಕ್ಷ ಮೊಟ್ಟೆಗಳನ್ನು ಸಂಸ್ಕರಿಸಲಾಗುತ್ತದೆ.

ಈ ನಡುವೆ ಮೊಟ್ಟೆ ಬೆಲೆ ಕುಸಿತದಿಂದ ಕೋಳಿ ಸಾಕಾಣಿಕೆದಾರರಿಗೆ ನಷ್ಟದ ಭೀತಿ ಹೆಚ್ಚಾಗಿದೆ. ಆಹಾರ ವೆಚ್ಚ, ಸಾರಿಗೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚುತ್ತಿರುವ ಸಮಯದಲ್ಲಿ ದರ ಇಳಿಕೆಯಾಗಿರುವುದು ಉತ್ಪಾದಕರಿಗೆ ದೊಡ್ಡ ಸವಾಲಾಗಿದೆ.

ಗಲ್ಫ್ ರಫ್ತು ಮತ್ತೆ ಆರಂಭವಾದರೆ ಮಾರುಕಟ್ಟೆ ಸ್ಥಿರವಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ ರಾಜ್ಯದ ಮೊಟ್ಟೆ ಮಾರುಕಟ್ಟೆ ಅನಿಶ್ಚಿತತೆಯಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಎನ್‌ಇಸಿಸಿಯ ಮಾರಾಟ ಪ್ರಚಾರ ಅಧಿಕಾರಿ ವಿ. ಶೇಷನಾರಾಯಣ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com