ಸಾಂದರ್ಭಿಕ ಚಿತ್ರ 
ರಾಜ್ಯ

ಎಸ್ಎಸ್ಎಲ್‏ಸಿ: ಶೇ 73.70 ಫಲಿತಾಂಶ; ಉಡುಪಿಯನ್ನು ಹಿಂದಿಕ್ಕಿದ ಹಾಸನ, ಯಾದಗಿರಿಗೆ ಕಡೆಯ ಸ್ಥಾನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ಕಳೆದ ಮಾರ್ಚ್ ನಲ್ಲಿ ನಡೆಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 73.70ರಷ್ಟು ವಿದ್ಯಾರ್ಥಿಗಳು...

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾಮಂಡಳಿ ಕಳೆದ ಮಾರ್ಚ್ ನಲ್ಲಿ ನಡೆಸಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ 73.70ರಷ್ಟು ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 1.8 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಕಳೆದ ವರ್ಷ ಶೇ. 71.93ರಷ್ಟು ಫಲಿತಾಂಶ ದಾಖಲಾಗಿತ್ತು.

ಈ ಬಾರಿ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಶೇ. 79.59 ರಷ್ಟು ಬಾಲಕಿಯರು ಹಾಗೂ ಶೇ. 68.46ರಷ್ಟು ಬಾಲಕರು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಜೂನ್ 21ರಿಂದ 27ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.

ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಉಡುಪಿಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ಜಿಲ್ಲೆ ಎರಡನೇ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ರಾಜ್ಯಾದ್ಯಂತ ಮಾರ್ಚ್ 21ರಿಂದ ಏ.4ರವರೆಗೆ 2847 ಪರೀಕ್ಷಾ ಕೇಂದ್ರಗಳಲ್ಲಿ 8.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಏ.10ರಿಂದ ಏ.25ರವರೆಗೆ ಮೌ‌ಲ್ಯಮಾಪನ ನಡೆಸಲಾಗಿತ್ತು. ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆ ಡಿಜಟಲೀಕರಣಗೊಂಡಿದ್ದು, ನಿರೀಕ್ಷೆಗೂ ಮುನ್ನವೇ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ  ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಂದು ಮಧ್ಯಾಹ್ನ 3 ಗಂಟೆಗೆ ಆಯಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟಗೊಳ್ಳಲಿದೆ. ಫಲಿತಾಂಶ ಈಗಾಗಕಲೇ ಇಲಾಖೆಯ ವೆಬ್‌ಸೈಟ್ http://kseeb.kar.ni.in ಹಾಗೂ http://karresults.nic.in ಗಳಲ್ಲಿ ಲಭ್ಯ‌ವಿದೆ. ಮಧ್ಯಾಹ್ನದ ನಂತರ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್‌ ಸಂ‌ಖ್ಯೆಗೆ ಎಸ್ಎಂಎಸ್ ಮೂಲಕ ಫಲಿತಾಂಶ ತಲುಪಲಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಒಂದೂ ಶೂನ್ಯ ಫಲಿತಾಂಶವಿಲ್ಲ:
ರಾಜ್ಯದ ಸರ್ಕಾರಿ ಶಾಲೆಗಳಿಂದ ಅತ್ಯತ್ತಮ ಫಲಿತಾಂಶ ಹೊರಬಿದ್ದಿದೆ. ಒಟ್ಟು 5202 ಸರ್ಕಾರಿ ಶಾಲೆಗಳ ಪೈಕಿ ಶೇ.77.84ರಷ್ಟು ಫಲಿತಾಂಶ ದೊರೆತಿದ್ದರೆ, ಅನುದಾನಿತ ಶಾಲೆಗಳಲ್ಲಿ ಶೇ.77.21ರಷ್ಟು ಫಲಿತಾಂಶ ದಾಖಲಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಶೇ. 82.72 ಫಲಿತಾಂಶ ದೊರೆತಿದೆ.

ಇದೇ ಮೊದಲ ಬಾರಿಗೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ. 2017–18ರಲ್ಲಿ 102 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಹೊರಬಿದ್ದಿತ್ತು. ಇದು ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿ ಎಂದು ಉಮಾಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, 9 ಅನುದಾನಿತ ಹಾಗೂ 37 ಅನುದಾನ ರಹಿತ ಶಾಲೆಗಳು ಸೇರಿ 46 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದೊರೆತಿದೆ. ಈ ಶಾಲೆಗಳ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಪೈಕಿ 2 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದರೆ, 11 ವಿದ್ಯಾರ್ಥಿಗಳು 624, 19 ವಿದ್ಯಾರ್ಥಿಗಳು 623, 39 ವಿದ್ಯಾರ್ಥಿಗಳು 622, 43 ವಿದ್ಯಾರ್ಥಿಗಳು 621 ಹಾಗೂ 56 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ. ಪ್ರಥಮ ಭಾಷೆಯಲ್ಲಿ 8620, ದ್ವಿತೀಯ ಭಾಷೆಯಲ್ಲಿ 3404, ತೃತೀಯ ಭಾಷೆಯಲ್ಲಿ 8138, ಗಣಿತದಲ್ಲಿ 1626, ವಿಜ್ಞಾನದಲ್ಲಿ 226, ಸಮಾಜ ವಿಜ್ಞಾನದಲ್ಲಿ 3141 ವಿದ್ಯಾರ್ಥಿಗಳು ಗರಿಷ್ಠ ಅಂಕ ಗಳಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಗರ ಭಾಗಕ್ಕೆ ಹೋಲಿಸಿದರೆ, ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ.70.05ರಷ್ಟು ಫಲಿತಾಂಶ ದೊರೆತಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ.76.67ರಷ್ಟು ಫಲಿತಾಂಶ ದಾಖಲಾಗಿದೆ. ಕನ್ನಡ ಮಾಧ್ಯಮದ ಶಾಳೆಗಳಲ್ಲಿ ಶೇ.67.33 ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶೇ.81.23ರಷ್ಟು ಫಲಿತಾಂಶ ದಾಖಲಾಗಿದೆ. ರಾಜ್ಯಾದ್ಯಂತ ಒಟ್ಟು 3683 ದಿವ್ಯಾಂಗ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 2494  ಅಂದರೆ ಶೇ.67.71ರಷ್ಟು ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.

ಬೆಂಗಳೂರು, ಮಂಗಳೂರಿಗೆ ಹೆಚ್ಚು ಶ್ರೇಯಾಂಕ:
ಫಲಿತಾಂಶದಲ್ಲಿ ಬೆಂಗಳೂರು ನಗರಕ್ಕೆ 5, ಮಂಗಳೂರಿಗೆ 4, ಹಾಸನಕ್ಕೆ ಎರಡು ಶ್ರೇಯಾಂಕಗಳು ದೊರೆತಿವೆ. ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್‌ ತಾಲೂಕಿನ ಸಂತ ಫಿಲೋಮಿನ  ಇಂಗ್ಲಿಷ್ ಹೈಸ್ಕೂಲ್ ಸೃಜನ 625 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಉತ್ತರ ಕನ್ನಡ ಜಿಲ್ಲೆ ಕುಮಟಾದ ನಾಗಾಂಜಲಿ ಪರಮೇಶ್ವರ್ ನಾಯಕ್ ಎಂಬ ವಿದ್ಯಾರ್ಥಿ ಕೂಡ 625 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಭಾನವ ಯು.ಎಸ್. (624), ಬೆಂಗಳೂರು ಉತ್ತರದ ಭಾವನಾ ಆರ್. (624)ಬೆಂಗಳೂರು ಉತ್ತರದ ಸಾಯಿ ರಾಮ್ ಎಸ್ (624), ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಂಭವಿ ಎಚ್. ವಿ. (624), ತುಮಕೂರಿನ ಹರ್ಷಿತ್ ಸಿ (624), ಮಂಗಳೂರು, ಪುತ್ತೂರಿನ. ಸಿಂಚನಾ ಲಕ್ಷ್ಮೀ (624) ಮಂಗಳೂರು, ಸುಳ್ಯದ  ಕೃಪಾ ಕೆ.ಆರ್ (634), ಬಂಟ್ವಾಳದ ಅನುಪಮಾ ಕಾಮತ್ ಹಾಗೂ ಚಿನ್ಮಯಿ (ತಲಾ 624), ಹಾಸನದ ಪ್ರಗತಿ ಎಂ. ಗೌಡ ಹಾಗೂ ಅಭಿನ್ . ಬಿ (ತಲಾ 624) ಅಂಕಗಳನ್ನು ಗಳಿಸಿ ಮೊದಲ ಹತ್ತು ಶ್ರೇಯಾಂಕದ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಜೂನ್ 21ರಿಂದ ಪೂರಕ ಪರೀಕ್ಷೆ:
ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಜೂನ್ 21ರಿಂದ 26ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಮೇ 2ರಿಂದ 15ರವರೆಗೆ ವಿದ್ಯಾರ್ಥಿಗಳು  ಉತ್ತರಪತ್ರಿಕೆಯ ಸ್ಕ್ಯಾನ್‌ ಪ್ರತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮೇ 6ರಿಂದ 17ರವರೆಗೆ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವಿಷಯದ ಛಾಯಾಪ್ರತಿಗೆ 405 ರೂ. ಹಾಗೂ ಮರುಮೌಲ್ಯಮಾಪನಕ್ಕೆ 805 ರೂ. ನಿಗದಿಪಡಿಸಲಾಗಿದೆ. ಪೂರಕ ಪರೀಕ್ಷೆಗೆ ವಿದ್ಯಾರ್ಥಿಗಳು ಒಂದು ವಿಷಯಕ್ಕೆ 290ರೂ., ಎರಡು ವಿಷಯಕ್ಕೆ 350 ರೂ.., ಮೂರು ಅಥವಾ ಮೂರಕ್ಕಿಂತ ಹೆಚ್ಚಿನ‌ ವಿಷಯಗಳಿಗೆ 470 ರೂ. ಗಳನ್ನು ಪಾವತಿಸಬೇಕು. ಮೇ 2ರಿಂದ ಪರೀಕ್ಷಾ ಶುಕ್ಲ ಹಾಘೂ ಆನ್‌ ಲೈನ್‌ ವಿವರಗಳನ್ನು ಅಪ್‌ ಲೋಡ್ ಮಾಡಬಹುದಾಗಿದೆ.

ಜಿಲ್ಲಾವಾರು ಗುಣಮಟ್ಟದ ಫಲಿತಾಂಶ:
ಇದೇ ಮೊದಲ ಬಾರಿಗೆ ಶೇಕಡಾವಾರು ಫಲಿತಾಂಶದ ಜೊತೆಗೆ, ವಿವಿಧ ಜಿಲ್ಲೆಗಳ ಗುಣಮಟ್ಟದ ಫಲಿತಾಂಶವನ್ನು ತಾಳೆ ಹಾಕಲಾಗಿದೆ. ಇದರಲ್ಲಿ ಶಾಲೆಗಳ ಒಟ್ಟಾರೆ ಶೇಕಡಾವಾರ ಫಲಿತಾಂಶ, ಸರಾಸರಿ ಫಲಿತಾಂಶ ಹಾಗೂ ಶೇ.60ಕ್ಕಿಂತ ಪಹೆಚ್ಚಿನ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಕೂಡ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಗುಣಮಟ್ಟದ ಶಿಕ್ಷಣದ ಪಟ್ಟಿಯಲ್ಲಿಯೂ ಕೊನೆಯ ಸ್ಥಾನದಲ್ಲಿಯೇ  ತೃಪ್ತಿ ಪಟ್ಟುಕೊಂಡಿದೆ.

ಜಿಲ್ಲಾವಾರು ಫಲಿತಾಂಶ:
ಹಾಸನ ಜಿಲ್ಲೆಗೆ ಶೇ. 89.33
ರಾಮನಗರ ಶೇ. 88.49
ಬೆಂಗಳೂರು ಗ್ರಾಮಾಂತರ ಶೇ. 88.34
ಉತ್ತರ ಕನ್ನಡ ಶೇ. 88.12
ಉಡುಪಿ ಶೇ. 87.97
ಚಿತ್ರದುರ್ಗ ಶೇ. 87.46
ಮಂಗಳೂರು ಶೇ. 86.73
ಕೋಲಾರ ಶೇ. 86.71
ದಾವಣಗೆರೆ ಶೇ.85.94
ಮಂಡ್ಯ  ಶೇ. 85.65
ಮಧುಗಿರಿ ಶೇ.84.81
ಶಿರಸಿ  ಶೇ, 84.67
ಚಿಕ್ಕೋಡಿ ಶೇ. 84.09
ಚಿಕ್ಕಮಗಳೂರು ಶೇ. 82.76
ಚಾಮರಾಜನಗರ ಶೇ. 80.58
ಕೊಪ್ಪಳ  ಶೇ. 80.45
ಮೈಸೂರು ಶೇ. 80.32
ತುಮಕೂರು ಶೇ. 79.92
ಹಾವೇರಿ  ಶೇ. 79.75
ಚಿಕ್ಕಬಳ್ಳಾಪುರ ಶೇ. 79.69
ಶಿವಮೊಗ್ಗ  ಶೇ. 79.13
ಕೊಡಗು ಶೇ. 78.81
ಬಳ್ಳಾರಿ ಶೇ. 77.98
ಬೆಳಗಾವಿ ಶೇ. 77.43
ವಿಜಯಪುರ ಶೇ.77.36
ಬೆಂಗಳೂರು ಉತ್ತರ ಶೇ. 76.21
ಬಾಗಲಕೋಟೆ ಶೇ. 75.28
ಧಾರವಾಡ ಶೇ.75.04
ಬೀದರ್ ಶೇ. 74.96
ಕಲಬುರಗಿ ಶೇ. 74.65
ಗದಗ ಶೇ. 74.05
ಬೆಂಗಳೂರು ದಕ್ಷಿಣ ಶೇ. 68.83
ರಾಯಚೂರು ಶೇ. 65.33
ಯಾದಗಿರಿ  ಶೇ. 53.95

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT