ರಾಜ್ಯ

ಸಿದ್ದಾರ್ಥ್ ಅವರ ಆತ್ಮಹತ್ಯೆ, ಹಣದ ಲೆಕ್ಕಪರಿಶೋಧನೆ ಬಗ್ಗೆ ತನಿಖೆ ನಡೆಯಲಿ:ಬಿಆರ್ ಬಾಲಕೃಷ್ಣನ್

Sumana Upadhyaya
ಬೆಂಗಳೂರು: ಉದ್ಯಮಿ ವಿಜಿ ಸಿದ್ದಾರ್ಥ್ ಸಾವಿನ ನಂತರ ಅವರು ಬರೆದಿಟ್ಟಿದ್ದರು ಎನ್ನಲಾದ ಡೆತ್ ನೋಟ್ ನಲ್ಲಿ ಆದಾಯ ತೆರಿಗೆ ಇಲಾಖೆ ಮಾಜಿ ನಿರ್ದೇಶಕರಿಂದ ತಮಗೆ ನಿರಂತರವಾಗಿ ಮಾನಸಿಕ ಕಿರುಕುಳವಾಗುತ್ತಿತ್ತು ಎಂದು ಬರೆದಿದ್ದರು. ಅದೀಗ ತೀವ್ರ ಚರ್ಚಾಸ್ಪದವಾಗಿದ್ದು ಟ್ಯಾಕ್ಸ್ ಟೆರ್ರರಿಸಂ ಎಂಬ ವಿಷಯವನ್ನಿಟ್ಟುಕೊಂಡು ಐಟಿ ಅಧಿಕಾರಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಲಾಗುತ್ತಿದೆ.
ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿರುವ ಸಂದರ್ಭದಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಆದಾಯ ತೆರಿಗೆ ಇಲಾಖೆ ಮಾಜಿ ಪ್ರಧಾನ ಮುಖ್ಯ ಆಯುಕ್ತ ಬಿಆರ್ ಬಾಲಕೃಷ್ಣನ್ ಅವರನ್ನು ಮಾತನಾಡಿಸಿದರು. ಅವರು ಐಟಿ ಇಲಾಖೆ ಸೇವೆಯಿಂದ ಮೊನ್ನೆ ಜುಲೈ 31ರಂದು ನಿವೃತ್ತಿ ಹೊಂದಿದ್ದಾರೆ. ಅವರ ಅವಧಿಯಲ್ಲಿಯೇ ತೆರಿಗೆ ಉಲ್ಲಂಘನೆ ಹಿನ್ನಲೆಯಲ್ಲಿ ಸಿದ್ದಾರ್ಥ್ ಮತ್ತು ಸಿಸಿಡಿ ಮೇಲೆ ದಾಳಿ ನಡೆಸಲಾಗಿತ್ತು. 
ಸಿದ್ದಾರ್ಥ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕೃಷ್ಣನ್, ಸಿದ್ದಾರ್ಥ ಅವರ ಸಾವು ನಿಜಕ್ಕೂ ದುರದೃಷ್ಟಕರ ಮತ್ತು ದುಃಖದ ವಿಷಯ. ಇದರಲ್ಲಿ ಏನೋ ಒಳಸಂಚು ಇದೆ ಎಂದು ಅನಿಸುತ್ತದೆ. ಸಿದ್ದಾರ್ಥ್ ತಮ್ಮ ಆಸ್ತಿಯ ಸಣ್ಣ ಭಾಗವನ್ನು 3,200 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಮತ್ತು ವೈಯಕ್ತಿಕವಾಗಿ ಅವರು ಉತ್ತಮ ಯೋಜನೆ ಮಾಡಿ ಕೆಲಸ ಮಾಡುವ ವ್ಯಕ್ತಿ. ಅವರಿಗೆ ಐಟಿ ಇಲಾಖೆ ಯಾವತ್ತಿಗೂ ಅನ್ಯಾಯ ಮಾಡಿಲ್ಲ ಎಂದರು.
ಅವರ ಅವ್ಯವಹಾರ ವಿರುದ್ಧ ಸಿಕ್ಕಿರುವ ಸಾಕಷ್ಟು ಸಾಕ್ಷಿಗಳ ಪ್ರಕಾರ ಅವರಿಂದ ಬರಬೇಕಾದ ತೆರಿಗೆ ಸಾಕಷ್ಟಿದ್ದವು. ಸಾರ್ವಜನಿಕ ಆದಾಯವನ್ನು ರಕ್ಷಿಸಲು ಕ್ರಮಗಳನ್ನು ಕೈಗೊಳ್ಳುವುದು ಯಾವುದೇ ತೆರಿಗೆ ಆಡಳಿತಾಧಿಕಾರಿಯ ಕೆಲಸವಾಗಿರುತ್ತದೆ. ಸಿದ್ದಾರ್ಥ್ ಅವರ ಮನವಿ ಮೇರೆಗೆ ಅವರ ಮೈಂಡ್ ಟ್ರೀ ಷೇರುಗಳನ್ನು ಬಿಡುಗಡೆ ಮಾಡಿಸಿದೆವು. 
ಸಿದ್ದಾರ್ಥ್ ಅವರ ಡೆತ್ ನೋಟ್ ಅವರ ಸಂಸ್ಥೆಯ ಉದ್ಯೋಗಿಗಳು, ಆಡಿಟರ್ ಗಳನ್ನು ಉದ್ದೇಶಿಸಿ ಬರೆದಿದ್ದರು ಎಂದು ತೋರಿಸಲಾಗುತ್ತಿದ್ದು ಅವರು ಕಣ್ಮರೆಯಾದ ಸ್ವಲ್ಪ ಹೊತ್ತಿನಲ್ಲಿಯೇ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಈ ಪತ್ರದ ಬಗ್ಗೆ ನನಗೆ ಅನುಮಾನವಿದೆ, ಇದರ ಬಗ್ಗೆ ಕೂಲಂಕಷ ಸಮಗ್ರ ತನಿಖೆಯಾಗಬೇಕು ಎಂದು  ಒತ್ತಾಯಿಸಿದರು.
"ಏಂಜಲ್ ಟ್ಯಾಕ್ಸ್" ಮತ್ತು "ಟ್ಯಾಕ್ಸ್ ಟೆರ್ರರಿಸಂನಂತಹ ಭಾವನಾತ್ಮಕವಾಗಿ ಪದ ಬಳಕೆಯಿಂದ ತೆರಿಗೆ ಸುಧಾರಣೆಗಳ ಕುರಿತ ವಿಷಯಗಳು ಇಂದು ಹಳಿತಪ್ಪಿ ಹೋಗುತ್ತಿವೆ ಎಂದು ಕೂಡ ಬಿ ಆರ್ ಬಾಲಕೃಷ್ಣನ್ ಹೇಳುತ್ತಾರೆ.
SCROLL FOR NEXT