ರಾಜ್ಯ

10 ದಿನದಲ್ಲಿ ಮೊದಲ ಕಂತಿನ ಕಿಸಾನ್ ಸಮ್ಮಾನ್ ಹಣ ರೈತರ ಖಾತೆಗೆ: ಸಿಎಂ ಯಡಿಯೂರಪ್ಪ

Lingaraj Badiger
ರಾಯಚೂರು: ನೆರೆ - ಬರದಿಂದ ಕೆಂಗೆಟ್ಟಿರುವ ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದ ರೈತರಿಗೆ ಮೊದಲ ಕಂತಿನ ಎರಡು ಸಾವಿರ ರೂ. ನೆರವನ್ನು ಹತ್ತು ದಿನಗಳಲ್ಲಿ ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೋಮವಾರ ಪುನರುಚ್ಚರಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ತಲೆದೋರಿರುವ ನೆರೆ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿ ಅಧಿಕಾರಿಗಳಿಂದ ವರದಿ ಪಡೆದ ಬಳಿಕ ಯರಮರಸ್ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಮತ್ತು ಬರ ಪರಿಸ್ಥಿತಿಯಿಂದಾಗಿ ರಾಜ್ಯದ ರೈತರು ಸಂಕಷ್ಟದಲಿದ್ದು, ಕಿಸಾನ್ ಸಮ್ಮಾನ್ ನಿದಿ ಯೋಜನೆಯಡಿ ಕೇಂದ್ರ ಸರ್ಕಾರ ರೈತರಿಗೆ ಮೂರು ಕಂತುಗಳಲ್ಲಿ ಆರು ಸಾವಿರ ರೂ ನೆರವು ನೀಡುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಸಹ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂ ನೆರವು ನೀಡಲಿದೆ. ಮೊದಲ ಕಂತು ಪಾವತಿಗೆ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದರು. 
ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗಿದ್ದು, ಪ್ರಮುಖ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರ ಬಿಡಲಾಗುತ್ತಿದೆ. ಲಿಂಗಸಗೂರಿನ ನಾರಾಯಣಪುರ ಅಣೆಕಟ್ಟೆಗೆ ಇಂದು 2.90 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 2.97 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಆಲಮಟ್ಟೆಯಿಂದ 3.25 ಲಕ್ಷ ಕ್ಯೂಸೆಕ್ ನೀರು ಹೊರಹೋಗುತ್ತಿದೆ ಎಂದರು. 
ಲಿಂಗಸಗೂರಿನ 14 ಕುಟುಂಬಗಳು ನಡುಗಡ್ಡೆಯಲ್ಲಿದ್ದು, ಸಂತ್ರಸ್ತರಿಗೆ ಸೂಕ್ತ ಆಹಾರ ವೈದ್ಯಕೀಯ ಸೇವೆ ಒದಗಿಸಲಾಗುವುದು. ಸಂತ್ರಸ್ತರ ರಕ್ಷಣೆಗೆ ವಿಶೇಷ ಗಮನಹರಿಸಲಾಗಿದ್ದು, ಸಂತ್ರಸ್ಥರನ್ನು ರಕ್ಷಿಸುವ ಈಜು ಪರಿಣಿತರಿಗೆ ಲೈಫ್ ಜಾಕೇಟ್ ನೀಡಲಾಗಿದೆ ಎಂದು ಹೇಳಿದರು. 
ಕಳೆದ 2009ರಲ್ಲಿ ಉತ್ತರ ಕರ್ನಾಟಕ ಪ್ರವಾಹಕ್ಕೆ ತುತ್ತಾದ ಸಂದರ್ಭದಲ್ಲಿ 52 ಹಳ್ಳಿಗಳನ್ನು ಸ್ಥಳಾಂತರ ಮಾಡಲಾಗಿತ್ತು. ಈ ಹಿಂದೆ ಕೈಗೊಂಡ ಕ್ರಮಗಳ ಪರಿಣಾಮ ಇದೀಗ ಹೆಚ್ಚಿನ ಅನಾಹುತ ತಪ್ಪಿದೆ. ಪದೇ ಪದೇ ಪ್ರವಾಹಕ್ಕೆ ಸಿಲುಕುವ ಇನ್ನಷ್ಟು ಮನೆಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಯಡಿಯೂರಪ್ಪ ಮಾಹಿತಿ ನೀಡಿದರು. 
ಪ್ರವಾಹ ಸಂತ್ರಸ್ಥ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ. ಜತೆಗೆ ಮುಳುಗಡೆಯಾದ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವುದು. ಕೃಷ್ಣಾ ನದಿ ಪ್ರವಾಹದ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದರು.
SCROLL FOR NEXT