ರಾಜ್ಯ

ಅಜ್ಜನ ಅಂತ್ಯಕ್ರಿಯೆಗೂ ತೆರಳದೆ, ಸಂತ್ರಸ್ತರ ನೆರವಿಗೆ ನಿಂತ ಜಿಲ್ಲಾಧಿಕಾರಿ: ಕರ್ತವ್ಯ ನಿಷ್ಠೆಗೆ ಶ್ಲಾಘನೆ

Lingaraj Badiger

ವಿಜಯಪುರ: ಅಜ್ಜ ವಿಧಿವಶರಾದ ಸುದ್ದಿ ತಿಳಿದ ಮೇಲೂ ಅಂತಿಮ ದರ್ಶನಕ್ಕೂ ತೆರಳದೆ ಪ್ರವಾಹ ಸಂತ್ರಸ್ತರ ನೆರವಿಗೆ ನಿಂತು ಕರ್ತವ್ಯ ನಿಷ್ಠೆ ಮೆರೆಯುವ ಮೂಲಕ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಮಾದರಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ ಕೃಷ್ಣಾ, ಭೀಮಾ ನದಿ ಅಪಾಯದ ಮಟ್ಟ ಮೀರಿ ಹರಿದು ಅನೇಕ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಹಲವಾರು ಮಂದಿ ನಿರಾಶ್ರಿತರಾಗಿದ್ದು, ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸ್ವತಃ ಜಿಲ್ಲಾಧಿಕಾರಿ ಶ್ರಮಿಸುತ್ತಿದ್ದಾರೆ.

ಕಳೆದೊಂದು ವಾರದಿಂದ ಕಚೇರಿಯಲ್ಲಿ ಕೂರದೆ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ಕೊಟ್ಟು, ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.

ವೈ.ಎಸ್.ಪಾಟೀಲ್ ಅವರ ತಾಯಿಯ ತಂದೆ ಮಲ್ಲಪ್ಪ ನಾಯ್ಕರ್ (91) ಕಳೆದ ಶುಕ್ರವಾರ ರಾತ್ರಿ ಬೈಲಹೊಂಗಲ ತಾಲೂಕಿನ ನಾಗನೂರಿನಲ್ಲಿ ನಿಧನರಾಗಿದ್ದಾರೆ. ಬಾಲ್ಯದಿಂದ ಸಾಕಿ ಸಲಹಿದ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಅವರು ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.

ಜಿಲ್ಲೆಯ ಯಾವುದೇ ಅಧಿಕಾರಿಗಳಿಗೂ ರಜೆ ನೀಡದೇ ಸ್ವತಃ ಕೆಲಸ ಮಾಡುವ ಮೂಲಕ ನೆರೆ ಸಂತ್ರಸ್ತರ ಕಣ್ಣೀರು ಒರೆಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಹಿಂದೆ 2009ರಲ್ಲಿ ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯ ಉಂಟಾದಾಗ ವಿಜಯಪುರ ತಾಲೂಕಿನ ಸಾರವಾಡದಲ್ಲಿ ಡೋಣಿ ಪ್ರವಾಹಕ್ಕೆ ಸಿಲುಕಿದ್ದ ಇದ್ದಿಲು ತಯಾರಿಕೆ ಕಾರ್ಮಿಕರನ್ನು ಅಂದು ಉಪ ವಿಭಾಗಾಧಿಕಾರಿಯಾಗಿದ್ದ ಅವರು ಪ್ರಾಣದ ಹಂಗು ತೊರೆದು ತಾವೇ ಸ್ವತಃ ರಕ್ಷಣಾ ಕಾರ್ಯ ಕೈಗೊಂಡು ಮಾನವೀಯತೆ ಮೆರೆದಿದ್ದರು. ಈಗ ಅಜ್ಜನ ಅಂತ್ಯಕ್ರಿಯೆಗೂ ತೆರಳದೆ ಸಂತ್ರಸ್ತರ ರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ನಿಜಕ್ಕೂ ಶ್ಲಾಘನೀಯ.

SCROLL FOR NEXT