ಯಡಿಯೂರಪ್ಪ-ಪ್ರಧಾನಿ ಭೇಟಿ(ಸಂಗ್ರಹ ಚಿತ್ರ) 
ರಾಜ್ಯ

ಪ್ರಧಾನಿಯನ್ನು ಭೇಟಿಯಾದ ಯಡಿಯೂರಪ್ಪ: ಪರಿಹಾರ ಬಿಡುಗಡೆಯ ವಿಶ್ವಾಸ ವ್ಯಕ್ತಪಡಿಸಿದ ಸಿಎಂ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನವದೆಹಲಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸುಮಾರು 40 ನಿಮಿಷಗಳ ಕಾಲ ಪ್ರಧಾನಿಯೊಂದಿಗೆ ಮುಖ್ಯಮಂತ್ರಿ ರಾಜ್ಯದ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಿರಿಯ ನಾಯಕ ಆರ್. ಅಶೋಕ್ ಕೂಡ ಈ ವೇಳೆ ಉಪಸ್ಥಿತರಿದ್ದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ  ತೀವ್ರ ಪ್ರವಾಹದಿಂದ ಉಂಟಾಗಿರುವ ಹಾನಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಂತ್ರಸ್ತರಿಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ನೆರೆಹಾವಳಿಯಿಂದ ಉಂಟಾದ ಸಂತ್ರಸ್ತರು ಸಂಕಷ್ಟ ಅನುಭವಿಸುತ್ತಿದ್ದು, ಇದರ ಸಂಪೂರ್ಣ ಮಾಹಿತಿಯನ್ನು ಪ್ರಧಾನಿಗೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಕೂಡ ಈ ಸಂದರ್ಭದಲ್ಲಿ ಇದ್ದು, ಮಾಹಿತಿ ನೀಡಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಕೂಡ ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಕೇಂದ್ರದಿಂದ ಮತ್ತೊಂದು ಅಧ್ಯಯನ ತಂಡ ರಾಜ್ಯಕ್ಕೆ ಶೀಘ್ರ ಆಗಮಿಸಲಿದೆ. ತಕ್ಷಣ ತಾತ್ಕಾಲಿಕ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಚರ್ಚೆ ಮಾಡಿ ಹೇಳುತ್ತೇನೆ ಎಂದು ಮೋದಿ ಭರವಸೆ ನೀಡಿದ್ದಾರೆ. ನೋಡೋಣ, ಅವರು ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ರಾಜ್ಯದಲ್ಲಿ 108 ವರ್ಷಗಳಲ್ಲೇ ಅತಿ ಹೆಚ್ಚಿನ ಅತಿವೃಷ್ಟಿ ಉಂಟಾಗಿದೆ. 15 ದಿನಗಳ ಹಿಂದೆ ಬರದ ಪರಿಸ್ಥಿತಿಯಿದ್ದ ರಾಜ್ಯದಲ್ಲಿ ಈಗ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ಬಿಟ್ಟಿರುವುದರಿಂದ ಆಗಿರುವ ಹಾನಿ ಮುಂತಾದ ವಿಷಯಗಳನ್ನು ಪ್ರಧಾನಿಗೆ ಮನವರಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸುಮಾರು 40 ಸಾವಿರ ಕೋಟಿ ರೂ.ಗೂ ಅಧಿಕ ಹಾನಿ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ರಸ್ತೆ, ಮನೆ, ಸೇತುವೆ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಮತ್ತೆ ನಿರ್ಮಿಸಬೇಕಾಗಿದೆ ಎಂದರು.

ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆಯೂ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ. ಅವರು ಖಂಡಿತವಾಗಿಯೂ ಪರಿಹಾರ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಆರ್. ಅಶೋಕ್ ಮಾತನಾಡಿ, ಸುಮಾರು 40 ನಿಮಿಷಗಳ ಕಾಲ ಪ್ರಧಾನಿಯೊಂದಿಗೆ ಚರ್ಚಿಸಲಾಗಿದೆ. ಇಡೀ ರಾಜ್ಯದ ಚಿತ್ರಣವನ್ನು ಕೊಟ್ಟಿದ್ದೇವೆ. ಪ್ರವಾಹದಿಂದ ಉಂಟಾದ ಸಾವು-ನೋವು, ಹಾನಿ, ಭೂಕುಸಿತ, ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಸೇರಿದಂತೆ ಸಂಪೂರ್ಣ ವಿವರಗಳನ್ನು ನೀಡಿದ್ದೇವೆ. ಪ್ರಾರಂಭಿಕವಾಗಿ 10 ಸಾವಿರ ಕೋಟಿ ರೂ.ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ. ಖಂಡಿತವಾಗಿಯೂ ಅವರು ಹಣ ಬಿಡುಗಡೆ ಮಾಡುವ ವಿಶ್ವಾಸವಿದೆ ಎಂದು ಹೇಳಿದರು.

ಸಂಪೂರ್ಣ ಮನೆ ನಿರ್ಮಿಸಲು ಐದು ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ ಎಂಬ ಮಾಹಿತಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅಶೋಕ್ ಹೇಳಿದರು.


ನಾಳೆ ಪಕ್ಷದ ಅಧ‍್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಲಾಗುವುದು. ಯಾರು ಸಂಪುಟದಲ್ಲಿರಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ