ರಾಜ್ಯ

ನಿವೃತ್ತಿಯ ಅಂಚಿನಲ್ಲಿ ಅರ್ಜುನ; ಈ ಬಾರಿ ಮೈಸೂರು ದಸರಾ ಅಂಬಾರಿ ಧನಂಜಯನ ಹೆಗಲಿಗೆ?

Sumana Upadhyaya

ಬೆಂಗಳೂರು:ಈ ವರ್ಷ ಮೈಸೂರು ದಸರಾದಲ್ಲಿ ಹೊಸ ಆನೆ ಅಂಬಾರಿ ಹೊರಲಿದೆ. ಇಷ್ಟು ವರ್ಷ ಅಂಬಾರಿ ಹೊತ್ತುಕೊಂಡು ಬಂದಿದ್ದ ಅರ್ಜುನ ಆನೆ ನಿವೃತ್ತಿ ಅಂಚಿನಲ್ಲಿರುವುದರಿಂದ ಹೊಸ ಆನೆಯನ್ನು ತರಲು ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. 


ಹೊಸ ಆನೆ ನೋಡಲು ಸುಂದರವಾಗಿರಬೇಕು, ಆಕರ್ಷಕವಾಗಿರಬೇಕು, ಎತ್ತರವಾಗಿರಬೇಕು ಮತ್ತು ದಷ್ಟಪುಷ್ಟವಾಗಿ ಕಾಣಬೇಕು ಮತ್ತು ಶಾಂತ, ಮೃದು ಸ್ವಭಾವದ ಆನೆಯಾಗಿರಬೇಕು. ಈ ಹಿಂದೆ ಯಾವುದೇ ಆನೆ ಅಥವಾ ಮಾವುತನನ್ನು ಕೊಂದು ಹಾಕಿರುವ ಪ್ರಕರಣ ನಡೆದಿರಬಾರದು. ಆನೆಯ ಮೈಮೇಲೆ ಯಾವುದೇ ಗಾಯಗಳು ಅಥವಾ ಗುರುತುಗಳು ಇರಬಾರದು. 


ಇಲ್ಲಿಯವರೆಗೆ ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನಾ ಆನೆ ಸದ್ಯದಲ್ಲಿಯೇ ನಿವೃತ್ತಿಯಾಗಲಿದೆ. ನಾಡಹಬ್ಬ ದಸರಾದಲ್ಲಿ ಅಂಬಾರಿ ಹೊರುವ ಆನೆ ಸದೃಢವಾಗಿರಬೇಕೆಂದು ಇದೀಗ ಎರಡನೇ ಪಂಕ್ತಿಯ ಆನೆಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮೈಸೂರು ದಸರಾ ಸಮಿತಿ ತರಬೇತಿ ನೀಡಲು ಆರಂಭಿಸಿದೆ. ಕರ್ನಾಟಕದ ಅರಣ್ಯ ಇಲಾಖೆಯ ವಿವಿಧ ಶಿಬಿರಗಳಲ್ಲಿ ಇರುವ ಸುಮಾರು 100 ಆನೆಗಳಲ್ಲಿ ಅರಣ್ಯ ಇಲಾಖೆ 36 ವರ್ಷದ ಧನಂಜಯ ಎಂಬ ಆನೆಯನ್ನು ಆಯ್ಕೆಮಾಡಿಕೊಂಡಿದೆ. ಅರ್ಜುನ ಆನೆಗೆ ಈಗಾಗಲೇ 59 ವರ್ಷವಾಗಿದ್ದು ಅದರ ಸ್ಥಾನಕ್ಕೆ ಧನಂಜಯ ಆನೆಯನ್ನು ತರುವ ಆಲೋಚನೆಯಿದೆ ಅಧಿಕಾರಿಗಳಿಗೆ.


ದಸರಾ ಆರಂಭಕ್ಕೆ ಮುನ್ನ ಕಾಡಿನಿಂದ ಮೈಸೂರು ಪುರ ಪ್ರವೇಶಿಸುವ ಸಾಂಪ್ರದಾಯಿಕ ಮೆರವಣಿಗೆ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು ಮೈಸೂರಿನಲ್ಲಿ ಚಾಲನೆ ನೀಡಲಾಗುತ್ತಿದ್ದು ನಾಲ್ಕು ಆನೆಗಳನ್ನು ಜನರ ಮುಂದೆ ಪ್ರದರ್ಶಿಸಲಾಗುತ್ತದೆ. ಅವುಗಳು ಅರ್ಜುನ(59ವ), ಅಭಿಮನ್ಯು(53), ಧನಂಜಯ(36ವ) ಮತ್ತು ಈಶ್ವರ(49ವ).


ಈ ವರ್ಷ ಅರಣ್ಯ ಇಲಾಖೆ ತಂಡಗಳಲ್ಲಿ 14 ಆನೆಗಳನ್ನು ಕಳುಹಿಸಲಿದೆ. ಇವೆಲ್ಲದರಲ್ಲಿ ಧನಂಜಯ ಸಣ್ಣ ಆನೆಯಾಗಿರುವುದರಿಂದ ಅದನ್ನೇ ಈ ಬಾರಿಯ ದಸರಾಕ್ಕೆ ಆಯ್ಕೆ ಮಾಡುವ ಸಾಧ್ಯತೆಯಿದೆ. ಅರ್ಜುನ ನಿವೃತ್ತಿ ಅಂಚಿನಲ್ಲಿರುವುದರಿಂದ ನಾಲ್ಕೂ ಆನೆಗಳಿಗೆ ಭಾರವಾದ ಮರದ ಅಂಬಾರಿ ಹೊರಿಸಿ 40 ದಿನಗಳ ಕಾಲ ತರಬೇತಿ ನೀಡಲಾಗುವುದು ಎನ್ನುತ್ತಾರೆ ದಸರಾ ಆನೆಗಳ ಉಸ್ತುವಾರಿ ಹೊತ್ತಿರುವ ಪಶು ವೈದ್ಯಾಧಿಕಾರಿ ಡಾ ಡಿ ಎನ್ ನಾಗರಾಜ್.


ವೈಭವೋಪೇತ ದಸರಾ ಜಂಬೂ ಸವಾರಿ ಅಕ್ಟೋಬರ್ 8ರಂದು ನೆರವೇರಲಿದೆ ಎನ್ನುತ್ತಾರೆ ಮೈಸೂರಿನ ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್. ಅರ್ಜುನ ಆನೆಯ ಪ್ರತಿಭೆಯನ್ನು ಬಳಸಿಕೊಂಡು ಉಳಿದ ಆನೆಗಳಿಗೆ ತರಬೇತಿ ಕೊಡಲಾಗುವುದು ಎಂದರು.


ಧನಂಜಯ ಆನೆ ಸಿಕ್ಕಿದ್ದು ಹಾಸನದ ಆಲೂರಿನಲ್ಲಿ. ಅಲ್ಲಿಂದ ದುಬಾರೆಗೆ ಕರೆತರಲಾಯಿತು. ಅಲ್ಲಿ ಈಶ್ವರ ಆನೆ ಜೊತೆ ವಾಸಿಸುತ್ತಿದೆ. ಕಳೆದ ವರ್ಷ ದಸರೆಯಲ್ಲಿ ಭಾಗವಹಿಸಿದ್ದ ಆನೆಗಳಾದ ಗೋಪಾಲಸ್ವಾಮಿ ಮತ್ತು ಗೋಪಿಯನ್ನು ಸೋಲಿಸಿತ್ತು. 

SCROLL FOR NEXT