ರಾಜ್ಯ

ಬೆಳಗಾವಿ ಜಿಲ್ಲೆಯಲ್ಲಿ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆ ಹಾನಿ ಪರಿಶೀಲನೆ

Nagaraja AB

ಬೆಳಗಾವಿ:  ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಅಧ್ಯಯನ ತಂಡ ಇಂದು ಜಿಲ್ಲೆಯ  ಚಿಕ್ಕೋಡಿ, ರಾಯಬಾಗ, ಗೋಕಾಕ ಮತ್ತು ಅಥಣಿ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಹಾನಿ  ಕುರಿತು ಪರಿಶೀಲನೆ ನಡೆಸಿತು.

 ಕೇಂದ್ರ ಗೃಹ ಇಲಾಖೆ  ಆಡಳಿತ ವಿಭಾಗದ ಜಂಟಿ  ಕಾರ್ಯದರ್ಶಿ ಪ್ರಕಾಶ, ಹಣಕಾಸು ಇಲಾಖೆಯ  ನಿರ್ದೇಶಕ ಎಸ್. ಸಿ. ಮೀನಾ ಅವರನ್ನೊಳಗೊಂಡ ತಂಡ ಸರ್ಕ್ಯೂಟ್  ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿ ನೆರೆಯ ಬಗ್ಗೆ ಮಾಹಿತಿ ಪಡೆದುಕೊಂಡರು.  ನಂತರ ನೆರೆ ಪೀಡಿತದಿಂದ ಆದ ಹಾನಿಯ ಕುರಿತಾದ ಚಿತ್ರಗಳನ್ನು ವೀಕ್ಷಿಸಿದರು. 

ಜಿಲ್ಲೆಯಲ್ಲಿ ಪ್ರವಾಹ ಹಾಗೂ ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು  ಜಿಲ್ಲಾಧಿಕಾರಿ ಡಾ.ಎಸ್. ಬಿ. ಬೊಮ್ಮನಹಳ್ಳಿ ಕೇಂದ್ರ ಅಧ್ಯಯನ ತಂಡಕ್ಕೆ ಮಾಹಿತಿ ನೀಡಿದರು. ನಂತರ ಈ ತಂಡ  ಚಿಕ್ಕೋಡಿ ತಾಲೂಕಿಗೆ ಪ್ರಯಾಣ ಬೆಳೆಸಿತು. ಈಸಂದರ್ಭದಲ್ಲಿ ಮಳೆ, ಬೆಳೆ ಹಾನಿ , ರಸ್ತೆ ಸೇತುವೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಹಾನಿ ಬಗ್ಗೆ ಪರಿಶೀಲನೆ ನಡೆಸಿತು.

ಆಗಸ್ಟ್ 25ರವರೆಗೂ ಈ ತಂಡ ರಾಜ್ಯದ ವಿವಿಧೆಡೆ ಪ್ರವಾಹ ಭಾದಿತ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ. ಬಳಿಕ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. 
 

SCROLL FOR NEXT