ರಾಜ್ಯ

ದಿಶಾ ಮಸೂದೆ, ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಅಸಮಾಧಾನ 

Sumana Upadhyaya

ಬೆಂಗಳೂರು: ಅತ್ಯಾಚಾರಿಗಳಿಗೆ 21 ದಿನಗಳೊಳಗೆ ಕಠಿಣ ಶಿಕ್ಷೆ ನೀಡುವ ದಿಶಾ ಮಸೂದೆಯನ್ನು ಆಂಧ್ರ ಪ್ರದೇಶ ಸರ್ಕಾರ ಜಾರಿಗೆ ತಂದಿರುವುದಕ್ಕೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕಳೆದ ವಾರ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಎನ್ ಕೌಂಟರ್ ನಲ್ಲಿ ಪೊಲೀಸರು ಸಾಯಿಸಿದ್ದು ಕಾನೂನಿನ ಪ್ರಕಾರ ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.


ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಆರೋಪಿಗಳು ಇನ್ನೂ ಅಪರಾಧಿಗಳು ಹೌದೇ, ಅಲ್ಲವೇ ಎಂದು ದೃಢವಾಗುವವರೆಗೆ ತನಿಖಾ ಹಂತದಲ್ಲಿ ಎನ್ ಕೌಂಟರ್ ನಡೆದಿರುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು. ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಜಾರಿಗೆ ತಂದಿರುವ ಮಸೂದೆಯಲ್ಲಿ ರೇಪಿಸ್ಟ್ ಗಳಿಗೆ 21 ದಿನಗಳೊಳಗೆ ಶಿಕ್ಷೆ ನೀಡಬೇಕೆಂದು ಹೇಳಲಾಗಿದೆ. 21 ದಿನಗಳಲ್ಲಿ ಆರೋಪಿಗಳ ವಿಚಾರಣೆ, ಮರು ವಿಚಾರಣೆ ಮತ್ತು ತೀರ್ಪು ಪ್ರಕಟ ಸಾಧ್ಯವೇ, ಈ ಕಾನೂನು ಜಾರಿಗೆ ಬಂದರ ಲೋಪದೋಷವಾಗುತ್ತದೆ ಎಂದರು.


ನಿರ್ಭಯಾ ಕೇಸಿನಲ್ಲಿ ತೀರ್ಪು ವಿಳಂಬವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಿರುವುದು ಸಂತೋಷ, ಪೌರತ್ವ ತಿದ್ದುಪಡಿ ಕಾಯ್ದೆಯಡಿ ನಿರ್ದಿಷ್ಟ ಧರ್ಮವನ್ನು ಹೊರಗಿಡುವುದು ಸರಿಯಲ್ಲ ಎಂದರು.


ಬೇರೆ ದೇಶಗಳಲ್ಲಿ ವಾಸಿಸಲು ಸಾಧ್ಯವಾಗದವರಿಗೆ ಆಶ್ರಯ ಕಲ್ಪಿಸಲು ಕಾನೂನಿನಲ್ಲಿ ಸಾಧ್ಯತೆಯಿದೆ.ಆದರೆ ಜಾತಿ ಅಥವಾ ಧರ್ಮವನ್ನು ಹೊರಗಿಟ್ಟು ಕಾನೂನು ರಚಿಸಬಾರದು. ಎಲ್ಲಾ ಧರ್ಮದ ಜನರು ಭಾರತದಲ್ಲಿ ನೆಲೆಸಲು ಹಕ್ಕಿದೆ. ಕಾಯ್ದೆ ಜಾರಿಗೆ ಬಂದ ನಂತರ ಕೆಲ ರಾಜ್ಯಗಳಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.

SCROLL FOR NEXT