ರಾಜ್ಯ

ಬೆಂಗಳೂರು: ಏಕಾಂಗಿಯಾಗಿ ಪ್ರತಿಭಟಿಸುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ, ಮುಂದುವರೆದ ಬಿಗಿ ಭದ್ರತೆ

Lingaraj Badiger

ಬೆಂಗಳೂರು: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದ ಟೌನ್ ಹಾಲ್ ಬಳಿ ಒಬ್ಬೊಂಟಿಯಾಗಿ ಪ್ರತಿನಡೆಸುತ್ತಿದ್ದ ವ್ಯಕ್ತಿಯೋರ್ವನ ಮನವೊಲಿಸಿ ಪೊಲೀಸರು ಆತನ್ನನ್ನು ವಶಕ್ಕೆ ಪಡೆದಿದ್ದಾರೆ.

ಟೌನ್ ಹಾಲ್ ಬಳಿ ನಾಲ್ಕು ಕೆಎಸ್ ಆರ್ ಪಿ ತುಕಡಿ, ಒಂದು ಮಹಿಳಾ ಕೆಎಸ್ ಆರ್ ಪಿ, ಒಂದು ಸಿಎಆರ್ 260 ಪೊಲೀಸ್ ಸಿಬ್ಬಂದಿ, 50 ಸಂಚಾರ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಬಿಗಿ ಭದ್ರತೆ ಒದಗಿಸಲಾಗಿದೆ. 

ಪ್ರತಿಭಟನೆಯನ್ನು ವಿರೋಧಿಸಲು ಒಟ್ಟು 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. 

ಗುರುವಾರ ಪೊಲೀಸ್ ಸಿಬ್ಬಂದಿ ಕೊರತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ಶೇಷಾದ್ರಿಪುರಂ ಪೊಲೀಸ್ ಠಾಣಾ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ.

ಇನ್ಸ್ ಪೆಕ್ಟರ್ ಸಂಜೀವಯ್ಯ ನೇತೃತ್ವದಲ್ಲಿ ಪೊಲೀಸ್ ಪಡೆ ಸಜ್ಜಾಗಿದ್ದು, ಸೆಕ್ಷನ್ 144 ಜಾರಿ ಹಿನ್ನೆಲೆಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವವರನ್ನು ವಶಕ್ಕೆ ಪಡೆಯಲು 5 ಬಿಎಂಟಿಸಿ ಬಸ್ ನಿಯೋಜನೆಗೊಳಿಸಲಾಗಿದೆ. 

ನಗರ ಕೇಂದ್ರ ವಿಭಾಗದ ಡಿಸಿಪಿ ಚೇತನ್ ಸಿಂಗ್ ರಾಥೋಡ್ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ನಗರದ ವಿವಿಧ ಕಡೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದ್ದು, ಯಾವುದೇ ಪ್ರತಿಭಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇದುವರೆಗೂ ನಗರದಲ್ಲಿ ಎಲ್ಲೂ ಅಹಿತಕರ ಘಟನೆ ನಡೆದಿಲ್ಲ. ಶನಿವಾರದ ವರೆಗೆ 144 ಸೆಕ್ಷನ್ ಚಾಲ್ತಿಯಲ್ಲಿರುತ್ತದೆ ಎಂದರು. 
ಒಬ್ಬೊಬ್ಬರೇ ಬಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದರೆ ಅವರನ್ನು ಶಿಕ್ಷೆಗೆ ಒಳಪಡಿಸುವಂತಹ ಕಾನೂನಿದೆ  ಎಂದು ತಿಳಿಸಿದರು. 

144 ಸೆಕ್ಷನ್ ಮೀರಿದ್ದಕ್ಕೆ ಹಲಸೂರು ಗೇಟ್ ಹಾಗೂ ಎಸ್ ಜೆ ಪಾರ್ಕ್ ಸ್ಟೇಷನ್ ವ್ಯಾಪ್ತಿಗಳಲ್ಲಿ 8 ಪ್ರಕರಣಗಳು ದಾಖಲಾಗಿದ್ದು,  21 ಜನರನ್ನು ಬಂಧಿಸಲಾಗಿದೆ ಎಂದರು.

ಇನ್ನು 250ಕ್ಕಿಂತ ಹೆಚ್ಚು ಜನರನ್ನು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ನಿನ್ನೆ ಮಧ್ಯಾಹ್ನದ ಮೇಲೆ ಬಿಟ್ಟು ಕಳುಹಿಸಲಾಗಿದೆ ಎಂದರು. 

ಆರ್‌.ಟಿ.ನಗರದ ನಿವಾಸಿಗಳು ಇಂದು ನಡೆಸಲು ಉದ್ದೇಶಿಸಿದ್ದ ರಾಜ್‌ಭವನ ಚಲೋವನ್ನು ಪೊಲೀಸರು ಮನವಿ ಮೇರೆಗೆ ಕೈಬಿಟ್ಟಿದ್ದಾರೆ. ಬೆಂಗಳೂರು ಉತ್ತರ ಡಿಸಿಪಿ ಶಶಿಕುಮಾರ್ ಅವರು ಆರ್‌.ಟಿ.ನಗರ ಮಸೀದಿಗೆ ತೆರಳಿ ಮುಖಂಡರೊಂದಿಗೆ ಮಾತುಕತೆ ನಡೆಸಿದರು. 

ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಅದಕ್ಕೆ ಒಪ್ಪಿದ ಜಮಾಅತ್ ಕಮಿಟಿಯವರು ಪ್ರತಿಭಟನೆಯನ್ನು ಮುಂದೂಡಿದ್ದು, ಇನ್ನೊಂದು ದಿನ ನಡೆಸುವುದಾಗಿ ತಿಳಿಸಿದರು.

SCROLL FOR NEXT