ಮೈಸೂರು: ಧರ್ಮದ ಹೆಸರಿನಲ್ಲಿ ಪೌರತ್ವ ಕೊಡುವುದು ಸರಿಯಾದ ಕ್ರಮವಲ್ಲ, ಪೌರತ್ವ ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಇತರ ಧರ್ಮಗಳ ಜನರು ಭಾರತದ ಪೌರತ್ವ ಕಳೆದುಕೊಳ್ಳುವ ಆತಂಕವಿದೆ. ಇದು ಸರಿಯಾದ ಕಾಯ್ದೆಯಲ್ಲ ಎಂದು ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವೀಯ ದೃಷ್ಟಿ ಕೋನ ಇಟ್ಟುಕೊಂಡು ಕೊಡುವುದಾದರೆ ದೌರ್ಜನ್ಯಕೊಳಗಾದ ಮುಸ್ಲಿಂರಿಗು ಪೌರತ್ವ ಕೊಡಲಿ ಎಂದರು.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪಕ್ಷ ಹೋರಾಟ ಮುಂದುವರಿಸಲಿದೆ. ನಿಷೇಧಾಜ್ಞೆ ಇದ್ದ ಕಾರಣ ನಾವು ಮೈಸೂರಿನಲ್ಲಿ ಪ್ರತಿಭಟನೆ ಮಾಡಿಲ್ಲ. ಪೊಲೀಸ್ ರ ಅನುಮತಿ ಪಡೆದು ಹೋರಾಟ ಮುಂದುವರೆಸುತ್ತೇನೆ ಎಂದು ಹೇಳಿದರು.
ಬಿಜೆಪಿ ನಾಯಕರು ತಮ್ಮ ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಈ ಕಾಯ್ದೆ ತಂದಿದ್ದಾರೆ. ಇನ್ನು ಕೆಲವೆಡೆ ಚುನಾವಣೆ ನಡೆಯಲಿದೆ. ಇದರಲ್ಲಿ ಗೆಲ್ಲೋದಕ್ಕೆ ಬಿಜೆಪಿ ವೋಟ್ ಬ್ಯಾಂಕ್ ಮಾಡಿಕೊಳ್ತಿದೆ. ಹಿಂದೂ ಮುಸ್ಲಿಂ ಎಂದು ವಿಂಗಡಿಸಿ ರಾಜಕಾರಣ ಮಾಡುತ್ತಿದೆ. ಇದು ಬಿಜೆಪಿಯ ಅತ್ಯಂತ ಕ್ರೂರವಾದ ನಿರ್ಧಾರ ಎಂದು ಆಕ್ರೋಶ ಹೊರಹಾಕಿದರು.