ರಾಜ್ಯ

ಮಂಗಳೂರು ಗೋಲಿಬಾರ್; ಗೃಹ ಸಚಿವ ಬೊಮ್ಮಾಯಿ ವಜಾಗೊಳಿಸಲು ಹೆಚ್.ಡಿ ಕುಮಾರಸ್ವಾಮಿ ಒತ್ತಾಯ

Srinivas Rao BV

ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸ್ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆಯ ಹಿನ್ನಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ  ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಭಾನುವಾರ ಮಂಗಳೂರಿಗೆ ಭೇಟಿ ನೀಡಿದ ಕುಮಾರಸ್ವಾಮಿ ಗೋಲಿಬಾರ್  ಕೃತ್ಯದಲ್ಲಿ  ಭಾಗಿಯಾಗಿರುವ  ಪೊಲೀಸ್  ಅಧಿಕಾರಿಗಳನ್ನು  ಸೇವೆಯಿಂದ ಅಮಾನತ್ತುಗೊಳಿಸಿ, ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. 

ಘಟನೆಗಳ ಕುರಿತಂತೆ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಸುಳ್ಳುಗಳ ಸರಮಾಲೆಯನ್ನೇ ರೂಪಿಸಿದ್ದಾರೆ. ವಾಸ್ತವ ಸ್ಥಿತಿ  ಹಾಗೂ ನೈಜ ವಿವರಗಳನ್ನು  ಪೊಲೀಸ್ ಇಲಾಖೆ ಮುಚ್ಚಿಡುತ್ತಿದೆ ಎಂದು ದೂರಿದರು.

ಪೊಲೀಸ್ ಇನ್ಸ್ ಪೆಕ್ಟರ್ ಸೀತಾರಾಮ ಕುಂದೆರ್ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಕುಮಾರಸ್ವಾಮಿ, ಪೊಲೀಸರ ಗೋಲಿಬಾರ್ ನಲ್ಲಿ ಮೃತಪಟ್ಟಿರುವ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಎಫ್ ಐ ಆರ್ ನಲ್ಲಿ ನಮೂದಿಸಿರುವುದನ್ನು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನಡೆದಿರುವ ಘಟನೆ ಬಗ್ಗೆ ಯಾವುದೇ ವಿಷಾದವಿಲ್ಲ, ಗೋಲಿಬಾರ್ ನಡೆಸಿರುವುದು ತಪ್ಪು ಎಂದು ಒಪ್ಪಿಕೊಳ್ಳುವ ಸೌಜನ್ಯವೂ ಅವರಿಗೆ ಇಲ್ಲ ಎಂದು ಟೀಕಿಸಿದರು. ಪೊಲೀಸರ ಗೋಲಿಬಾರ್ ನಲ್ಲಿ ತಮ್ಮ ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಗಳ  ನೋವುಗಳನ್ನು ಅವರು ಯಾರಿಗೆ ಹೇಳಿಕೊಳ್ಳಬೇಕು. ಅವರ ಕುಟುಂಬಗಳ ಗತಿ ಏನು? ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಂಗಳೂರು ಉಪನಗರ  ಪ್ರದೇಶಗಳ ಆಡಳಿತದಲ್ಲಿ ಆರ್ ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವರು  ವಹಿಸಿರುವ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದರು.

SCROLL FOR NEXT