ರಾಜ್ಯ

ಕರ್ನಾಟಕಕ್ಕೆ ಕೇಂದ್ರದಿಂದ ಬರಬೇಕಿದೆ 3.2 ಸಾವಿರ ಕೋಟಿ ರೂ ಜಿಎಸ್ ಟಿ ಪರಿಹಾರ, 1.5 ಕೋಟಿ ರೂ ಮನ್ರೇಗಾ ಹಣ! 

Srinivas Rao BV

ಒಂದುವರೆ ತಿಂಗಳ ವಿಳಂಬದ ನಂತರ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸಲ್ಲಬೇಕಿದ್ದ ಆಗಸ್ಟ್-ನವೆಂಬರ್ ತಿಂಗಳ ಜಿಎಸ್ ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ಆದರೂ ಕರ್ನಾಟಕಕ್ಕೆ ನೀಡಬೇಕಿರುವ 3.2 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಇನ್ನೂ ಬಾಕಿ ಉಳಿಸಿಕೊಂಡಿದೆ. 

ಈಗ ಬಿಡುಗಡೆ ಮಾಡಿರುವ ಅಲ್ಪ ಮೊತ್ತದ ಪರಿಹಾರ ಧನ ರಾಜ್ಯದ ಯೋಜನೆಗಳ ಜಾರಿ, ಪ್ರವಾಹ ಪುನರ್ವಸತಿ ಹಾಗೂ ಡೆಡ್ ಲೈನ್ ಇರುವ ಇನ್ನಿತರ ಯೋಜನೆಗಳಿಗೆ ಸಾಲುವುದಿಲ್ಲ. ಇದಿಷ್ಟೇ ಅಲ್ಲದೇ ಕೇಂದ್ರದ ವಿಳಂಬ ಧೋರಣೆ, ಡಿಸೆಂಬರ್ ತಿಂಗಳಾಂತ್ಯಕ್ಕೆ ಬರಬೇಕಿರುವ ಕಂತು ಹಾಗೂ ಮುಂದಿನ ಮಾರ್ಚ್ ತಿಂಗಳಾಂತ್ಯಕ್ಕೆ ಬರಬೇಕಿರುವ ಕಂತುಗಳ ಬಗ್ಗೆಯೂ ಅನಿಶ್ಚಿತತೆ ಮೂಡಿಸಿದೆ. 

ಕರ್ನಾಟಕಕ್ಕೆ ಆಗಸ್ಟ್-ಸೆಪ್ಟೆಂಬರ್ ಹಾಗೂ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಒಟ್ಟಾರೆ 7,040 ಕೋಟಿ ರೂಪಾಯಿ ಮೊತ್ತದ ಜಿಎಸ್ ಟಿ ಪರಿಹಾರ ಧನ ಸಿಗಬೇಕಿತ್ತು. ಆದರೆ ಈ ವರೆಗೂ ಕೇಂದ್ರ ಬಿಡುಗಡೆ ಮಾಡಿರುವುದು ಮಾತ್ರ 3,600 ಕೋಟಿಯಷ್ಟೇ. ಮೊದಲ ಕಂತು ಆಗಸ್ಟ್-ಸೆಪ್ಟೆಂಬರ್ ತಿಂಗಳ ಅವಧಿಯದ್ದಕ್ಕೆ ಮಾತ್ರ ಅನ್ವಯವಾಗುತ್ತದೆ. ಆದರೆ ಅಕ್ಟೋಬರ್-ನವೆಂಬರ್ ತಿಂಗಳ ಬಾಕಿ 3,200 ಕೋಟಿ ರೂಪಾಯಿ ಮೊತ್ತ ಇನ್ನೂ ಬಾಕಿ ಇದೆ. ಇನ್ನು ಫೆಬ್ರವರಿ-ಮಾರ್ಚ್ ತಿಂಗಳ ಪರಿಹಾರ ಮೊತ್ತ 2020 ರ ವೇಳೆಗೆ ಮುಂದಿನ ಹಣಕಾಸು ವರ್ಷ ಪ್ರಾರಂಭಕ್ಕೂ ಮುನ್ನ ಮತ್ತೊಂದು ಕಂತು ಬರಬೇಕಿದೆ. 

ಇನ್ನು ಮನ್ರೇಗಾ ಯೋಜನೆಯಲ್ಲಿ ಬರಬೇಕಿದ್ದ ಹಣವನ್ನೂ ಕೇಂದ್ರ ಸರ್ಕಾರ ಪೂರ್ಣವಾಗಿ ನೀಡಿಲ್ಲ. 3 ವರ್ಷಗಳ ಒಟ್ಟು 803 ಕೋಟಿ ರೂಪಾಯಿ ಹಣ ರಾಜ್ಯಕ್ಕೆ ಬರಬೇಕಿದೆ. ಈ ವರ್ಷದ ಹಣ 757 ಕೋಟಿ ರೂಪಾಯಿ ಬಾಕಿ ಇದೆ. 

SCROLL FOR NEXT