ರಾಜ್ಯ

ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಗೆ 160 ವಸತಿ ಶಾಲೆ ಆಯ್ಕೆ, 32 ಕೋಟಿ ಮಂಜೂರು: ಸಚಿವ ಗೋವಿಂದ ಕಾರಜೋಳ

Sumana Upadhyaya

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಅಟಲ್ ಟಿಂಕರಿಂಗ್ ಲ್ಯಾಬ್ ಯೋಜನೆಯನ್ನು ಪ್ರಾರಂಭಿಸಿದ್ದು, ರಾಜ್ಯದ 160 ವಸತಿ ಶಾಲೆಗಳು ಈ ಯೋಜನೆಯಡಿ ಆಯ್ಕೆಯಾಗಿದ್ದು, ಪ್ರತಿ ಶಾಲೆಗೆ ತಲಾ 20 ಲಕ್ಷದಂತೆ 32 ಕೋಟಿ ರೂಪಾಯಿ ಮಂಜೂರು ಮಾಡಿದೆ ಎಂದು ಉಪಮುಖ್ಯಮಂತ್ರಿ ‌ಗೋವಿಂದ ಎಂ ಕಾರಜೋಳ ತಿಳಿಸಿದರು.


ಬೆಂಗಳೂರಿನಲ್ಲಿ ನಿನ್ನೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಆಯೋಜಿಸಿದ್ದ ವಸತಿ ಶಾಲೆಗಳಿಗೆ ನೂತನವಾಗಿ ಆಯ್ಕೆಯಾದ ಶಿಕ್ಷಕರಿಗೆ ನೇಮಕಾತಿ ಆದೇಶ ವಿತರಣೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದು, ಶೇಕಡಾ 95ರಷ್ಟು ಫಲಿತಾಂಶ ಬಂದಿದೆ. ದೀನ ದಲಿತರ ಬಗ್ಗೆ ಕಾಳಜಿ‌ ಇರುವ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ಬಜೆಟ್ನಲ್ಲಿ‌ ಗಂಗಾ ಕಲ್ಯಾಣ ಯೋಜನೆ, ಶಿಕ್ಷಣ, ಬಡವರಿಗೆ ಭೂಮಿ ಖರೀದಿ, ನೀರಾವರಿ ಯೋಜನೆಗೆ ಹೆಚ್ಚಿನ ‌ಅನುದಾನ‌ ನೀಡಲಿದ್ದಾರೆ ಎಂದರು.

ಮುಂದಿನ‌ ವರ್ಷ ಶೇಕಡಾ 80 ರಷ್ಟು ವಸತಿ ನಿಲಯಗಳು ಸ್ವಂತ ಕಟ್ಟಡ ಹೊಂದುವಂತೆ ಕ್ರಮ ಕೈಗೊಳ್ಳಲಾಗುವುದು. ವಸತಿ ಶಿಕ್ಷಣ ಸಂಸ್ಥೆಗಳಲ್ಲಿ 1.7 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಸಾಧಕರಾಗಬೇಕು. ಅದಕ್ಕಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಪಡಿಸಲಾಗುತ್ತಿದೆ. 3 ಸಾವಿರದ 527 ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಕೌನ್ಸಿಲಿಂಗ್ ಮೂಲಕ 660 ಶಿಕ್ಷಕರಿಗೆ ಸ್ಥಳ ನಿಯೋಜನೆ ಮಾಡಲಾಗಿದೆ‌. ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶೂ ನೀಡಿರಲಿಲ್ಲ ಎಂದು ತಿಳಿದ ಕೂಡಲೇ ಮಂಜೂರು ಮಾಡಿರುವುದಾಗಿ ತಿಳಿಸಿದರು.

SCROLL FOR NEXT