ರಾಜ್ಯ

ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿ ಕುರಿತು ಜನ ಜಾಗೃತಿ ಅಭಿಯಾನ

Shilpa D

ಶಿವಮೊಗ್ಗ: ಸಮಾಜದಲ್ಲಿನ ಶಾಂತಿಯನ್ನು ಕದಡುವ ದೃಷ್ಟಿಯಿಂದ ಜನರಿಗೆ ಕಾಯ್ದೆ ಬಗ್ಗೆ ತಪ್ಪು ತಿಳುವಳಿಕೆ ನೀಡುತ್ತಿರುವವರ ವಿರುದ್ಧವಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜ.1 ರಿಂದಲೇ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ. 

ನಗರದ ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪೌರತ್ವ ತಿದ್ದುಪಡಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ. ಡಿ. 11, 2019ರ ದಿನವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆ ಎರಡಲ್ಲೂ ಸಹ ಈ ಕಾಯ್ದೆ ಜಾರಿಯಾಗಿದ್ದು, ಇದು ದೇಶದ ನಾಗರಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜಾರಿಯಾಗಿರುವಂತಹ ಕಾನೂನಾಗಿದೆ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ನಾಗರಿಕರಲ್ಲಿ ಗೊಂದಲವನ್ನು ಉಂಟು ಮಾಡುತ್ತಿವೆ. ಈ ಕಾಯ್ದೆ ಜಾರಿಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗುವುದಿಲ್ಲ. ಎಲ್ಲಾ ಧರ್ಮಿಯರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತಹ ಪ್ರಯತ್ನ ಇದಾಗಿದೆ.

ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದಲ್ಲಿ ನೆಲೆಸಿರುವ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆಗೆ ಪೌರತ್ವ ತಿದ್ದುಪಡಿ ಕಾಯಿದೆ ಪೂರಕವೇ ಹೊರತು, ಭಾರತದಲ್ಲಿರುವ ಮುಸ್ಲಿಂ ಬಾಂಧವರಿಗೆ ಇದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ

ಜ. 1 ರಿಂದ ಜ.5 ರವರೆಗೆ ಮನೆ ಮನೆ ಸಂಪರ್ಕ, ಜ.6 ರಿಂದ ಜ.8 ರವರೆಗೆ ಚಹಾ ಕೂಟ ಹಾಗೂ ಚರ್ಚೆ, ಜ. 9 ರಿಂದ 10 ರವರೆಗೆ ಸಂವಾದ, ಜ. 11 ಮತ್ತು ಜ. 12 ರಂದು ಪತ್ರ ಚಳವಳಿ, ಸಹಿ ಸಂಗ್ರಹ ಕಾರ್ಯಕ್ರಮಗಳು ನಡೆಯಲಿವೆ. ಜ. 13 ರಿಂದ ಜ. 15 ರವರೆಗೆ ಸಮಾವೇಶಗಳು, ಸಾರ್ವಜನಿಕ ಸಭೆಗಳು ನಿರಂತರವಾಗಿ ನಡೆಯಲಿದ್ದು, ಮನೆ ಮನೆ ಭೇಟಿಯ ಸಂದರ್ಭದಲ್ಲಿ ಕಾಯ್ದೆ ಕುರಿತು ಎಲ್ಲಾ ವರ್ಗದ ಜನ ಸಾಮಾನ್ಯರಿಗೆ ತಿಳಿಸಲಾಗುವುದೆಂದು ಹೇಳಿದ್ದಾರೆ.

SCROLL FOR NEXT