ರಾಜ್ಯ

ಕೊಲ್ಹಾಪುರದಲ್ಲಿ ಸಿಎಂ ಯಡಿಯೂರಪ್ಪ ಪ್ರತಿಕೃತಿ ದಹನ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ 

Sumana Upadhyaya

ಬೆಳಗಾವಿ: ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಎರಡೂ ಕಡೆ ಪ್ರತಿಭಟನೆ ತೀವ್ರವಾಗಿದೆ. ಎರಡು ರಾಜ್ಯಗಳ ಮಧ್ಯೆ ಬಸ್ ಸಂಚಾರ ರದ್ದುಗೊಂಡಿದೆ.


ಶಿವಸೇನಾ ಕಾರ್ಯಕರ್ತರು ಕೊಲ್ಹಾಪುರ ಬಸ್ ನಿಲ್ದಾಣದ ಹತ್ತಿರ ನಿನ್ನೆ ಪ್ರತಿಭಟನೆ ಆರಂಭಿಸಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿದರು. ನಂತರ ಕಾರ್ಯಕರ್ತರ ಗುಂಪು ಅಪ್ಸರಾ ಥಿಯೇಟರ್ ಬಳಿ ಮೆರವಣಿಗೆ ಸಾಗಿ ಕನ್ನಡ ಸಿನಿಮಾಗಳ ಪ್ರದರ್ಶನವನ್ನು ಒತ್ತಾಯಪೂರ್ವಕವಾಗಿ ನಿಲ್ಲಿಸಿದರು. ಪ್ರತಿಭಟನಾಕಾರರು ಕನ್ನಡ ಸಿನಿಮಾ ಪೋಸ್ಟರ್ ಗಳನ್ನು ಹರಿದುಹಾಕಿದರು. ಕನ್ನಡ ಅಕ್ಷರದಲ್ಲಿ ಬರೆದ ಕೆಲವು ಅಂಗಡಿಗಳ ನಾಮಫಲಕಗಳಿಗೆ ಕಪ್ಪು ಮಸಿ ಬಳಿದರು. ಕೊಲ್ಹಾಪುರ ಹೊರವಲಯದಲ್ಲಿ ಇಂತಹ ಉದ್ರೇಕಕಾರಿ ಘಟನೆಗಳನ್ನು ಮಹಾರಾಷ್ಟ್ರ ಕಡೆಯ ಶಿವಸೇನಾ ಕಾರ್ಯಕರ್ತರು ನಡೆಸಿದರು.


ಕಾಂಗ್ರೆಸ್ ಮಾಜಿ ಶಾಸಕ ಸಟೇಜ್ ಪಾಟೀಲ್ ಮತ್ತು ಶಿವಸೇನಾ ಸಂಸದ ಧೈರ್ಯಶೀಲ ಮನೆ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ತೀವ್ರ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಕಳೆದ ಶನಿವಾರ ಬೆಳಗಾವಿ ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯವರ ಪ್ರತಿಕೃತಿ ದಹಿಸಿದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಕಡೆಯಿಂದ ಶಿವಸೇನಾ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಂಇಎಸ್ ಕಾರ್ಯಕರ್ತರನ್ನು ಎರಡೂ ರಾಜ್ಯಗಳ ಗಡಿಯಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂಬ ಕರ್ನಾಟಕ ನವನಿರ್ಮಾಣ ಸೇನೆ ನಾಯಕರ ಹೇಳಿಕೆ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರನ್ನು ಕೆರಳಿಸಿತ್ತು.

SCROLL FOR NEXT