ರಾಜ್ಯ

ಕನ್ನಡ ಭಾಷೆಯನ್ನು ಏಕೆ ಬಳಸುವುದಿಲ್ಲ?; ಪೊಲೀಸ್ ಅಧಿಕಾರಿಗೆ ಎಂ ಬಿ ಪಾಟೀಲ್ ಆಕ್ಷೇಪ

Sumana Upadhyaya

ಬೆಂಗಳೂರು:ಕೇಂದ್ರ ಸರ್ಕಾರದ ರಸ್ತೆ ಸುರಕ್ಷತೆಯ ಧ್ಯೇಯೋದ್ದೇಶದ ವಾಕ್ಯವನ್ನಿಟ್ಟುಕೊಂಡು ಪೊಲೀಸ್ ಅಧಿಕಾರಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಪೋಸ್ಟ್ ಮತ್ತು ಅದಕ್ಕೆ ಗೃಹ ಸಚಿವ ಎಂ ಬಿ ಪಾಟೀಲ್ ಅವರ ಟ್ವಿಟ್ಟರ್ ಪ್ರತಿಕ್ರಿಯೆ ಸುದ್ದಿಯಾಗಿದೆ.

ಬೆಂಗಳೂರು ಉತ್ತರ ಭಾಗದ ಡಿಸಿಪಿ ಕೇಂದ್ರ ಸರ್ಕಾರದ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಸಡಕ್ ಸುರಕ್ಷಾ-ಜೀವನ್ ರಕ್ಷಾ ಎಂಬ ಹಿಂದಿ ಭಾಷೆಯಲ್ಲಿರುವ ಧ್ಯೇಯವಾಕ್ಯವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕೇಂದ್ರ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯ ಆರಂಭಿಸಿದೆ.

ಇದಕ್ಕೆ ಗೃಹ ಸಚಿವ ಎಂ ಬಿ ಪಾಟೀಲ್ ಉತ್ತರಿಸಿ, ದಯವಿಟ್ಟು ಕನ್ನಡ ಭಾಷೆಗೆ ಆದ್ಯತೆ ನೀಡಿ, ಕರ್ನಾಟಕದಲ್ಲಿ ಸ್ನೇಹ, ಸೌಹಾರ್ದತೆಯಿಂದ, ಹೆಮ್ಮೆಯಿಂದ ಕನ್ನಡ, ತುಳು ಮತ್ತು ಕೊಡವ ಭಾಷೆಯನ್ನು ಉತ್ತೇಜಿಸಿ ಎಂದು ಪೋಸ್ಟ್ ಮಾಡಿದ್ದಾರೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿರುವುದರಿಂದ ಹಿಂದಿ ಭಾಷೆಯಲ್ಲಿರುವ ಧ್ಯೇಯವಾಕ್ಯವನ್ನು ಪ್ರಚಾರ ಮಾಡಿದ್ದರಲ್ಲಿ ತಪ್ಪೇನಿದೆ ಎಂಬುದು ಕೆಲವರ ವಾದ. ಈ ಟ್ವೀಟ್ ಮಾಡುವ ಮೊದಲು ಎಂ ಬಿ ಪಾಟೀಲ್ ಅವರೇ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿದ್ದರು.

30ನೇ ರಸ್ತೆ ಸುರಕ್ಷತಾ ಸಪ್ತಾಹವನ್ನು ಮೊನ್ನೆ ಫೆಬ್ರವರಿ 4ರಂದು ಬೆಂಗಳೂರು ಸಂಚಾರ ಪೊಲೀಸ್ ಮತ್ತು ಸಾರಿಗೆ ಇಲಾಖೆಯಿಂದ ಅಶೋಕ ನಗರ ಹಾಕಿ ಸ್ಟೇಡಿಯಂನಲ್ಲಿ ಉದ್ಘಾಟಿಸಲಾಗಿತ್ತು. ಶಾಂತಿನಗರ ಕ್ಷೇತ್ರದ ಶಾಸಕ ಎನ್ ಎ ಹ್ಯಾರಿಸ್ ಸೇರಿದಂತೆ ಹಲವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಭಾಗವಹಿಸಿದ್ದರು.

ಅದೇ ದಿನ ಟ್ವೀಟ್ ಮಾಡಿದ್ದ ಎಂ ಬಿ ಪಾಟೀಲ್, ರಸ್ತೆ ಸುರಕ್ಷತಾ ಕಾರ್ಯಕ್ರಮದ ಬಗ್ಗೆ ಫೋಟೋ ಸಮೇತ ಹಾಕಿದ್ದರು. ಬ್ಯಾನರ್ ನಲ್ಲಿ ಘೋಷವಾಕ್ಯದ ಕನ್ನಡ ಅನುವಾದ ರಸ್ತೆ ಸುರಕ್ಷತೆ-ಜೀವನ ರಕ್ಷೆ ಎಂದು ಬರೆಯಲಾಗಿತ್ತು. ಅದರ ಕೆಳಗೆ ಇಂಗ್ಲಿಷ್ ನಲ್ಲಿ ಸಡಕ್ ಸುರಕ್ಷಾ-ಜೀವನ ರಕ್ಷಾ ಎಂದು ಇತ್ತು.

ನಗರದ ಹಲವು ಕಡೆಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹವನ್ನು ಆಯೋಜಿಸಿದ ಕಾರಣ ಸಂಚಾರಿ ಪೊಲೀಸರು ಅದರ ಫೋಟೋ ಮತ್ತು ಸಂದೇಶಗಳನ್ನು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಅದರಂತೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸಾರಾ ಫಾತಿಮಾ ತಮ್ಮ ವಲಯದಲ್ಲಿ ಫೆಬ್ರವರಿ 6ರಂದು ನಡೆದ ಕಾರ್ಯಕ್ರಮದ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಅನುವಾದ ಮಾಡಿದ ಬರಹ ಕೂಡ ಇತ್ತು.

ಗೃಹ ಸಚಿವ ಎಂ ಬಿ ಪಾಟೀಲರ ಟ್ವೀಟ್ ಗೆ ಸಾರ್ವಜನಿಕರಲ್ಲಿ ಕೆಲವರಿಂದ ಕನ್ನಡ ಭಾಷೆಗೆ ಪ್ರೋತ್ಸಾಹ ನೀಡಿದ್ದಕ್ಕೆ ಭೇಷ್ ಸರ್ ಎಂದು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಬೆಂಗಳೂರು ಉತ್ತರ ವಿಭಾಗದ ಪೊಲೀಸ್ ಅಧಿಕಾರಿಯ ಅಸಹಾಯಕತೆ ಅವರಿಗೆ ಅರ್ಥವಾಗಿರಲಿಕ್ಕಿಲ್ಲ ಎಂಬುದು ಹಲವರ ವಾದ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಎಂ ಬಿ ಪಾಟೀಲ್, ನಾನು ನಮ್ಮ ಇಲಾಖೆಯ ಪೊಲೀಸ್ ಅಧಿಕಾರಿಯನ್ನು ಅವಮಾನ ಮಾಡಲು ಹೀಗೆ ಟ್ವೀಟ್ ಮಾಡಿದ್ದಲ್ಲ, ನಮ್ಮ ಕನ್ನಡ ಭಾಷೆಯನ್ನು ಪ್ರೋತ್ಸಾಹಿಸಿ ಎಂಬ ಉದ್ದೇಶದಿಂದ ಹೇಳಿದೆ ಎಂದರು.

ಇನ್ನು ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸಾರಾ ಫಾತಿಮಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

SCROLL FOR NEXT