ರಾಜ್ಯ

ಮಂಡ್ಯದ ವೀರ ಯೋಧ ಗುರು ಪಂಚಭೂತಗಳಲ್ಲಿ ಲೀನ

Lingaraj Badiger
ಮಂಡ್ಯ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಗುರುವಾರ ನಡೆದ ಭೀಕರ ಉಗ್ರ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ವೀರ ಯೋಧ ಎಚ್ ಗುರು ಅವರು ಶನಿವಾರ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ಇಂದು ಸಂಜೆ ಮಂಡ್ಯ ಜಿಲ್ಲೆ ಕೆ.ಎಂ. ದೊಡ್ಡಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಇಂದು ಸಿಆರ್ ಪಿಎಫ್ ಯೋಧ ಗುರು ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. 
ಗುರು ಅವರ ಸಹೋದರ ಮಧು ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ‘ಗುರು ಮತ್ತೆ ಹುಟ್ಟಿ ಬಾ’, ವಂದೇ ಮಾತರಂ ಎಂಬ ಘೋಷಣೆಗಳು ಮೊಳಗಿದವು. 
ಗುರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಜಿ ಪರಮೇಶ್ವರ, ಕೇಂದ್ರ ಸಚಿವ ಡಿವಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಸ್​.ಎಂ.ಕೃಷ್ಣ ಸೇರಿದಂತೆ ಹಲವು ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ವೀರ ಯೋಧನಿಗೆ ಭಾವಪೂರ್ಣ ವಿದಾಯ ಹೇಳಿದರು.
ಇದಕ್ಕೂ ಮುನ್ನ ಪಾರ್ಥಿವ ಶರೀರ ಸ್ವಗ್ರಾಮ ಗುಡಿಗೆರೆಯ ನಿವಾಸಕ್ಕೆ ಬರುತ್ತಿದ್ದಂತೆ ಹುತಾತ್ಮ ಗುರು ಅವರ ಪತ್ನಿ ಕಲಾವತಿ ಭಾವುಕ ಸೆಲ್ಯೂಟ್​ ಮಾಡಿದರು. ಈ ದೃಶ್ಯ ಎಲ್ಲರ ಕಣ್ಣಂಚಿನಲ್ಲಿ ನೀರು ತರಿಸಿತು.
ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ತರಲಾದ ಹುತಾತ್ಮ ಯೋಧ ಗುರು ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ಸ್ವಗ್ರಾಮ ಮದ್ದೂರಿನ ಗುಡಿಗೆರೆ ತರಲಾಯಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ಅಗಲಿದ ವೀರಯೋಧನ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.
SCROLL FOR NEXT