ರಾಜ್ಯ

ಹುತಾತ್ಮ ಯೋಧ ಗುರು ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ನಮನ; 25 ಲಕ್ಷ ರೂ. ಪರಿಹಾರ ಘೋಷಣೆ

Raghavendra Adiga
ಬೆಂಗಳೂರು: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ಯೋಧ ಎಚ್‌.ಗುರು ಅವರ ಪಾರ್ಥಿವ ಶರೀರ ನಗರಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಯೋಧ ಗುರು ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ 25 ಲಕ್ಷ ರೂ.ಪರಿಹಾರ ಘೋಷಿಸಿದ್ದಾರೆ. ಜತೆಗೆ ಯೋಧನ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸಹ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಗುರು ಅವರ ಪ್ರಾರ್ಥಿವ ಶರೀರ ನಗರಕ್ಕೆ ಆಗಮಿಸಿದಾಗ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗೌರವ ನಮನ ಸಲ್ಲಿಸಿದ ಬಳಿಕ ಈ ವಿಷಯ ತಿಳಿಸಿದರು.
ಇದಕ್ಕೆ ಮುನ್ನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಗುರು ಅವರ ಪಾರ್ಥಿವ ಶರೀರವನ್ನು ಸುಮಾರು 1 ಗಂಟೆ ಸುಮಾರಿಗೆ ತರಲಾಯಿತು.
ಆ ಸಂದರ್ಭ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಗೃಹ ಸಚಿವ ಎಂ.ಬಿ. ಪಾಟೀಲ್‌, ಸಂಸದ ಪಿ.ಸಿ.ಮೋಹನ್‌, ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌,  ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅರವಿಂದ ಲಿಂಬಾವಳಿ, ಮೇಯರ್‌ ಗಂಗಾಂಬಿಕಾ ಮಲ್ಲಿಕಾರ್ಜುನ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್‌ಭಾಸ್ಕರ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌  ಸೇರಿದಂತೆ ಸೇನಾಪಡೆಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಅಲ್ಲಿ ಹಾಜರಿದ್ದು ಗೌರವ ನಮನ ಸಲ್ಲಿಸಿದರು.
ವಿಮಾನ ನಿಲ್ದಾಣದಿಂದ ಪಾರ್ಥಿವ ಶರೀರವನ್ನು ಸೇನಾ ವಾಹನಕ್ಕೆ ತರುವಾಗ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರು ಪೊಲೀಸರೊಂದಿಗೆ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು.
ಬಳಿಕ ಅಲ್ಲಿಂದ ದೊಮ್ಮಲೂರು, ಟ್ರಿನಿಟಿ, ಪುರಭವನ ಮಾರ್ಗವಾಗಿ ಮಂಡ್ಯ ಜಿಲ್ಲೆಗೆ ಕೊಂಡೊಯ್ಯಲಾಯಿತು. 
ಮಾರ್ಗದುದ್ದಕ್ಕೂ ಸಾರ್ವಜನಿಕರು, ಅಭಿಮಾನಿಗಳು ಗುರು ಅವರ ಪರವಾಗಿ ಘೋಷಣೆ ಕೂಗಿ, ನಮನ ಸಲ್ಲಿಸುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಪಾರ್ಥಿವ ಶರೀರ ಹೊತ್ತ ವಾಹನಕ್ಕೆ ಸಂಚಾರ ದಟ್ಟಣೆ ಉಂಟಾಗದಂತೆ ಸಂಚಾರ ಪೊಲೀಸರು ಕ್ರಮಕೈಗೊಂಡಿದ್ದರು.
SCROLL FOR NEXT