ಟಿ. ನರಸಿಪುರ: 3 ದಿನಗಳ ದಕ್ಷಿಣದ ಕುಂಭ ಮೇಳಕ್ಕೆ ತ್ರಿವೇಣಿ ಸಂಗಮ ಸಜ್ಜು
ಮೈಸೂರು: ಮೈಸೂರು ಜಿಲ್ಲೆಯ ಟಿ. ನರಸಿಪುರದ ತ್ರೀವೇಣಿ ಸಂಗಮದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 11ನೇ ಕುಂಭ ಮೇಳಕ್ಕೆ ಸಿದ್ದತೆಗಳು ಇದಾಗಲೇ ಅಂತಿಮ ಹಂತದಲ್ಲಿದೆ.
ಕರ್ನಾಟಕ, ತಮಿಳುನಾಡು ಮತ್ತು ಕೇರಳದಿಂದ ಸುಮಾರು 3 ಲಕ್ಷಕ್ಕೂ ಅಧಿಕ ಭಕ್ತರು ಮೂರು ದಿನಗಳಲ್ಲಿ ಭಾಗವಹಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.. ಜಿಲ್ಲಾಡಳಿತವು ಮೇಳಕ್ಕೆ ಭದ್ರತಾ ಏರ್ಪಾಡು ಮಾಡಿದೆ ಪೋಲಿಸ್ ಸಿಬ್ಬಂದಿ ಹೊರತಾಗಿ ಕಮಾಂಡೋ ಪಡೆಯನ್ನು ಸಹ ನಿಯೋಜಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಶಂಕರ್, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಮೂರು ವರ್ಷಗಳ ಹಿಂದೆ ನಡೆದ ಮೇಳದಲ್ಲಿ ಒಂದು ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು ಆದರೆ ಈ ವರ್ಷ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ಸಾಧ್ಯತೆಯಿದೆ ಎಂದರು. ಸರ್ಕಾರ ಮತ್ತು ಅದರ ಏಜೆನ್ಸಿಗಳು ಮತ್ತು ವಿವಿಧ ಧಾರ್ಮಿಕ ಸಂಘಟನೆಗಳು ಮತ್ತು ಸಂಸ್ಥೆಗಳು ಈ ಕಾರ್ಯಕ್ರಮದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿವೆ. ಎಲ್ಲವೂ ಅಂತಿಮ ಹಂತದಲ್ಲಿದೆ. ಭಕ್ತರು ಬಟ್ಟೆಗಳನ್ನು ಬದಲಿಸಲು ಸ್ನಾನದ ಘಾಟ್ ಮತ್ತು ಪ್ರತ್ಯೇಕ ಶೆಡ್ಗಳನ್ನು ನಿರ್ಮಿಸಿದೆ.
ಆದಿಚಂಚನಗಿರಿ ಮಠ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಮತ್ತು ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ ಅವರುಗಳ ಪ್ರಯತ್ನದಿಂದ 1989 ರಲ್ಲಿ ಕುಂಭ ಮೇಳ ಪ್ರಾರಂಭವಾಗಿತ್ತು. ಟಿ. ನರಸಿಪುರದ ತ್ರಿವೇಣಿ ಸಂಗಮದ ಕುಂಭ ಮೇಳ ದಕ್ಷಿಣ ಭಾರತದ ಭಕ್ತರಿಗೆ ಸುವರ್ಣ ಅವಕಾಶ ಒದಗಿಸಿದೆ.
ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಕುಡಿಯುವ ನೀರು, ನೈರ್ಮಲ್ಯ, ರಸ್ತೆಗಳು, ಮೂಲಸೌಕರ್ಯ ಒದಗಿಸಿದೆ. ಭಕ್ತರ ಅನುಕೂಲಕ್ಕಾಗಿ ಎರಡು ತಾತ್ಕಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ 100 ಕ್ಕೂ ಹೆಚ್ಚು ಪರಿಣಿತ ಈಜುಗಾರರನ್ನು ನಿಯೋಜಿಸಲಾಗಿದೆ.
ಕಳೆದ ಭಾರಿ ಮೆಳಕ್ಕೆ ಅಗತ್ಯ ವ್ಯವಸ್ಥೆ ಮಾಡಲು ಜಿಲ್ಲಾಡಳಿತದಿಂದ 3 ಕೋಟಿ ರೂ. ವೆಚ್ಚ ಮಾಡಿದ್ದು ಸರ್ಕಾರದಿಂದ ಇನ್ನು 2 ಕೋಟಿರೂ ಬಾಕಿ ಬರಬೇಕಿದೆ. ಮೇಳದ ಅಂಗವಾಗಿ 'ಹೋಮ ಧರ್ಮ ಸಭಾ ನಡೆಯಲಿದೆ ಗುಂಜನರಸಿಂಹಸ್ವಾಮಿ ದೇವಸ್ಥಾನದಿಂದ ತಾತ್ಕಾಲಿಕ ತೇಲುವ ಸೇತುವೆಯನ್ನು ಸೈನ್ಯವು ಸ್ಥಾಪಿಸಿದ್ದು, ಆದಿಚಂಚನಗಿರಿ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಮತ್ತು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಮೊದಲಾದವರು ಕುಂಭ ಮೇಳದಲ್ಲಿ ಭಾಗಿಯಾಗುತ್ತಿದ್ದಾರೆ.