ರಾಜ್ಯ

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ಮೇಲೆ ಹದ್ದಿನ ಕಣ್ಣಿಡಲು ಸಿಎಂ ಸೂಚನೆ

Sumana Upadhyaya

ಬೆಂಗಳೂರು: ಮುಂದಿನ ತಿಂಗಳು ಎಸ್ ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಯಾವುದೇ ಅಡೆತಡೆಗಳಿಲ್ಲದೆ ಸುಗಮವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಮುಖ್ಯಮಂತ್ರಿಯ ಬಳಿಯೇ ಇರುವುದರಿಂದ ಅವರು ಈ ಆದೇಶ ಮಾಡಿದ್ದಾರೆ.

ಈ ಹಿಂದೆ ಅನೇಕ ಬಾರಿ ಪರೀಕ್ಷೆ ಸಮಯದಲ್ಲಿ ಅಕ್ರಮಗಳು ನಡೆದಂತೆ ಈ ಬಾರಿ ಆಗದಿರಲು ಮುನ್ನೆಚ್ಚರಿಕೆ ಕ್ರಮಗಳ ಕುರಿತು ನಿನ್ನೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವವರ ಮೇಲೆ ಹದ್ದಿನ ಕಣ್ಣಿಡುವಂತೆ ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಿಂ ಸೂಚಿಸಿದ್ದಾರೆ.

ಪರೀಕ್ಷೆ ವೇಳೆ ಹೆಚ್ಚಿನ ಭದ್ರತೆ ಒದಗಿಸಲು ಸಿಎಂ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಪೊಲೀಸ್ ನೇಮಕಾತಿ ಹುದ್ದೆ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರನ್ನು ಹತ್ತನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಯುವವರೆಗೆ ಕಸ್ಟಡಿಯಲ್ಲಿರಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ ಸಿ ಜಾಫರ್ ತಿಳಿಸಿದ್ದಾರೆ.

ಕಳೆದ ವರ್ಷ ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಜಾರಿಗೆ ಬಂದ ಕರ್ನಾಟಕ ಸುರಕ್ಷಿತ ಪರೀಕ್ಷಾ ವ್ಯವಸ್ಥೆ ಈ ವರ್ಷ ಕೂಡ ಮುಂದುವರಿಯಲಿದೆ. ಪ್ರಶ್ನೆಪತ್ರಿಕೆ ಇರಿಸಿರುವ ಎಲ್ಲಾ ಜಿಲ್ಲಾ ಖಜಾನೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಬಯೋ ಮೆಟ್ರಿಕ್ ಹಾಜರಿ ಮತ್ತು ಪರೀಕ್ಷಾ ಸಿಬ್ಬಂದಿಗೆ ವಿಶೇಷ ಐಡಿ ಕಾರ್ಡುಗಳನ್ನು ಕೂಡ ನೀಡಲಾಗುತ್ತಿದೆ.

ಪಿಯುಸಿ ಪರೀಕ್ಷೆಗಳ ನಿರ್ದೇಶಕರು ಮತ್ತು ಆಯಾ ಜಿಲ್ಲಾಧಿಕಾರಿಗಳ ಮೊಬೈಲ್ ಸಂಖ್ಯೆಗಳಿಗೆ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಪರೀಕ್ಷೆಗಳಿಗೆ ಬಳಸುವ ವಾಹನಗಳ ತಪಾಸಣೆ ಮತ್ತು ಭದ್ರತೆ ನೀಡಲಾಗುತ್ತಿದೆ.

SCROLL FOR NEXT