ಬೆಂಗಳೂರು: ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ 600 ಭಾರತೀಯ ಕಂಪನಿಗಳು ಮತ್ತು 200 ವಿದೇಶಿ ಸಂಸ್ಥೆಗಳು ಭಾಗಿಯಾಗಿದ್ದು ನಾಗರಿಕ ವಿಮಾನಯಾನ ಕೂಡ ಕೈಜೋಡಿಸಿದೆ. ಜಾಗತಿಕ ಮಟ್ಟದಲ್ಲಿ ಕೋಟ್ಯಂತರ ಅವಕಾಶಗಳಿಗೆ ಬೆಂಗಳೂರಿನ ಯಲಹಂಕ ವಾಯು ನೆಲೆಯೆ ರನ್ ವೇ ಆಗಲಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಜಿಡಿಪಿ ಬೆಳವಣಿಗೆಗೆ ಉತ್ಪಾದನಾ ಘಟಕಗಳ ಕೊಡುಗೆ ಮಹತ್ವದ್ದಾಗಿದೆ .ಸೇವಾ ವಲಯದ ಜಿಡಿಪಿಗೆ ಬೆಂಗಳೂರಿನ ಐಟಿ ಬಿಟಿ ಸಾಕಷ್ಟು ಕೊಡುಗೆ ನೀಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಲ್ಲಿ ಕೂಡ ರಾಜ್ಯದ ವಾಯುಯಾನ ಕ್ಷೇತ್ರ ವಿಶ್ವ ದರ್ಜೆಯ ವೈಮಾನಿಕ ತಂತ್ರಜ್ಞಾನ, ವಿನ್ಯಾಸ, ಕೌಶಲ್ಯದ ಕೊಡುಗೆ ನೀಡುತ್ತಿದೆ. ಸ್ಟಾರ್ಟ್ ಅಪ್ ಗಳು ವಾಯುಯಾನ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದೆ ಎಂದರು.
ಕಳೆದ ನಾಲ್ಕು ವರ್ಷಗಳಲ್ಲಿ, 2018 ಅಕ್ಟೋಬರ್ ವರೆಗೆ ರಕ್ಷಣಾ ಉಪಕರಣಗಳ ಖರೀದಿ ಹಾಗೂ 1027 ಕೋಟಿ ರೂ.ಮೊತ್ತದ ಒಪ್ಪಂದಗಳಿಗೆ 150 ಭಾರತೀಯ ಕಂಪನಿಗಳು ಸಹಿ ಹಾಕಿವೆ. 2018 ರ ಅಕ್ಟೋಬರ್ ವರೆಗೆ 164 ಭಾರತೀಯ ಸಂಸ್ಥೆಗಳಿಗೆ ಉತ್ಪಾದನೆಗೆ ರಕ್ಷಣಾ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ. ಇದನ್ನು ಹೊರತುಪಡಿಸಿ ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಯಾವುದೆ ಸ್ಮಾರ್ಟ್ ಅಪ್ ಸಂಸ್ಥೆಗಳು ಹೊಸ ಆವಿಷ್ಕಾರಕ್ಕೆ ಮುಂದಾದಲ್ಲಿ ಸಚಿವಾಲಯ ಸಂಪೂರ್ಣ ಸಹಕಾರ ಒದಗಿಸಲಿದೆ ಎಂದು ಭರವಸೆ ಅವರು ನೀಡಿದರು.
ಕಳೆದ ನಾಲ್ಕು ವರ್ಷಗಳಲ್ಲಿ 2037 ಕೋಟಿ ರೂ. ಸರ್ಕಾರಿ ಒಪ್ಪಂದದ ಮೂಲಕ ಹಾಗೂ 2000 ಕೋಟಿ ರೂ. ವಿದೇಶಿ ಹೂಡಿಕೆಗೆ ಒಪ್ಪಿಗೆ ನೀಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಮುಂಬೈ ಹಾಗೂ ಬೆಂಗಳೂರಿನ ಕೈಗಾರಿಕಾ ಕಾರಿಡಾರ್ ಅನ್ನು ಚೆನ್ನೈ ವರೆಗೆ ವಿಸ್ತರಿಸಲಾಗುವುದು. ಉತ್ತರಪ್ರದೇಶದಲ್ಲಿ ಕೂಡ ಹೊಸ ಕಾರಿಡಾರ್ ನಿರ್ಮಿಸಲಾಗುವುದು ಎಂದು ಅವರು ಹೇಳಿದರು.